ಶಿರಸಿ: ಅಡಕೆ ಬೆಳೆಗೆ ಎಲೆ ಚುಕ್ಕಿ ರೋಗ ಜಿಲ್ಲೆಯಲ್ಲಿ ಆರಂಭಗೊಂಡಿದೆ. ಹರಡುವಿಕೆ ಕಡಿಮೆ ಇದ್ದು ಅದರ ಪರಿಣಾಮ ಸದ್ಯ ತೀವ್ರವಾಗಿಲ್ಲದಿದ್ದರೂ ಸಹ ರೈತರು ಆದಷ್ಟು ಕಾಳಜಿ ವಹಿಸಿ ಅಡಿಕೆ ತೋಟದ ನಿರ್ವಹಣೆ ಮಾಡಬೇಕಾಗಿದೆ. ಅಡಕೆ ತೋಟದಲ್ಲಿ ಉಪ ಬೆಳೆಯನ್ನು ಸಹ ಬೆಳೆಯಲು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದು ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ ಹೇಳಿದರು.
ಇಲ್ಲಿನ ಟಿಎಂಎಸ್ ಸಂಸ್ಥೆಯ ಆವರಣದಲ್ಲಿ ಶನಿವಾರ ನಡೆದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿ, ಈ ವರ್ಷ ಅಡಕೆ ಉತ್ತಮ ಫಸಲು ಬಂದಿದ್ದು ಅಡಕೆ ದರ ಸಹ ಉತ್ತಮವಾಗಿದ್ದು ಸದಸ್ಯರು ಆರ್ಥಿಕವಾಗಿ ಸದೃಡರಾಗಲು ಸಾದ್ಯವಾಗಿದೆ. ಆದರೆ ಪ್ರಸಕ್ತ ವರ್ಷದಲ್ಲಿ ಈವರೆಗೆ ಉತ್ತಮ ಮಳೆಯಾಗದಿರುವುದು ಆತಂಕಕ್ಕೆ ಕಾರಣವಾಗಿದೆ. ಇತ್ತೀಚಿನ ದಿನದಲ್ಲಿ ನಮ್ಮ ಭಾಗದಲ್ಲಿಯೂ ಸಹ ಎಲೆ-ಚುಕ್ಕೆ ರೋಗ ಅಡಿಕೆ ಮರಕ್ಕೆ ಕಾಣಿಸುತ್ತಿದ್ದು,ಈ ರೋಗ ಬಾಧೆ ಕಳಸ, ಕೊಪ್ಪ ಈ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಿಸಿದ್ದು ಬಹಳಷ್ಟು ಅಡಕೆ ತೋಟಗಳು ಈ ರೋಗಕ್ಕೆ ತುತ್ತಾಗಿ ಅಪಾರ ಪ್ರಮಾಣದ ಬೆಳೆ ಹಾನಿ ಆಗಿದೆ. ನಮ್ಮ ಭಾಗದಲ್ಲಿ ಈ ರೋಗದ ಮುಂದಿನ ದಿನದಲ್ಲಿ ಬರಬಹುದಾದ ತೊಂದರೆ ಎದುರಿಸಲು ಈಗಿಂದಲೇ ಕ್ರಮವಹಿಸುವುದು ಅಗತ್ಯವಾಗಿದೆ ಎಂದರು.
ಅನಾರೋಗ್ಯಕ್ಕೊಳಗಾದವರ, ಸದಸ್ಯರ ಆರ್ಥಿಕ ಸಧೃಡತೆಗಾಗಿ ಈಗಾಗಲೇ ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ ಎಂದರು.
ಸದಸ್ಯರಿಗೆ ಅನಾರೋಗ್ಯ ಸಂದರ್ಭದಲ್ಲಿ ನೆರವಾಗುವ ಉದ್ದೇಶದಿಂದ
ಪ್ರಾರಂಭಿಸಿದ “ಆರೋಗ್ಯ ಸುರಕ್ಷಾ ಯೋಜನೆ” ಬಹಳ ಅನುಕೂಲವಾಗಿದೆ. ಈ ವರ್ಷ 429 ಸದಸ್ಯರಿಗೆ ರೂ.85,86,80೦ ಸಹಾಯ ನೀಡಿದ್ದು ಬಹಳಷ್ಟು ಸದಸ್ಯರಿಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಸದಸ್ಯರಿಗೆ ಹಾಗೂ ಸದಸ್ಯರ ಕುಟುಂಬದವರಿಗೆ ಆರೋಗ್ಯ ಸಮಸ್ಯೆ ಎದುರಾದಾಗ ಈ ಯೋಜನೆಯಿಂದ ಹೆಚ್ಚಿನ ಆರ್ಥಿಕ ಸಹಾಯ
ನೀಡಲು ಸಂಘವು ಯೋಚಿಸುತ್ತಿದೆ. ಸರಕಾರವನ್ನು ಅಥವಾ ಇತರೇ ಯಾವುದೇ ಮೂಲಗಳನ್ನು ಅವಲಂಬಿಸದೇ, ಸದಸ್ಯರಿಂದ ಪಡೆದ ಪ್ರೀಮಿಯಂ ರಕಂ ಹಾಗೂ ಸಂಘದಿಂದ ತೊಡಗಿಸಿದ ನಿಧಿ ಸೇರಿಸಿ ಸದಸ್ಯರ ಹಾಗೂ ಅವರ ಕುಟುಂಬದ ಅನಾರೋಗ್ಯದ ಸಂದರ್ಭದಲ್ಲಿ ಆಸ್ಪತ್ರೆಯ ಖರ್ಚು-ವೆಚ್ಚಗಳ ಬಹುಪಾಲು ರಕಂನ್ನು ಈ ಯೋಜನೆಯಿಂದ ಭರಿಸಬಹುದಾಗಿದೆ ಎಂದರು.
2022-23ನೇ ವರ್ಷದಲ್ಲಿ ಸಂಘದಲ್ಲಿ ಅಡಿಕೆ, ಕಾಳುಮೆಣಸು ವಿಕ್ರಿ ವಹಿವಾಟು 81519.75ಕ್ವಿಂಟಲ್‌ಗಳಷ್ಟಾಗಿದ್ದು ಹಸಿ ಅಡಿಕೆ
ವಿಕ್ರಿ ಸೇರಿ ಅಂತೂ 1,05,743 ಕ್ವಿಂಟಲ್ ವಿಕ್ರಿಯಾಗಿದ್ದು ಇದೊಂದು ಹೊಸ ದಾಖಲೆಯಾಗಿದೆ. ಸಂಘವು ಸದಸ್ಯರ ಅವಶ್ಯಕತೆಗಳಿಗನುಗುಣವಾಗಿ ಇನ್ನೂ ಹೆಚ್ಚಿನ ಯೋಜನೆಗಳನ್ನು ರೂಪಿಸಲಿದೆ ಎಂದರು.
ಉಪಾಧ್ಯಕ್ಷ ಎಂ ಪಿ ಹೆಗಡೆ ಹೊನ್ನೆಕಟ್ಟಾ, ನಿರ್ದೇಶಕರಾದ ಜಿ. ಟಿ. ಹೆಗಡೆ ತಟ್ಟಿಸರ, ಜಿ.ಎಂ.ಹೆಗಡೆ ಮುಳಖಂಡ, ವಿ.ಆರ್. ಹೆಗಡೆ ಮಣ್ಮನೆ, ಎನ್. ಡಿ. ಹೆಗಡೆ ಇತರರಿದ್ದರು. ಮುಖ್ಯ ಕಾರ್ಯ ನಿರ್ವಾಹಕ ಎಂ. ಎ. ಹೆಗಡೆ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.