ಭಟ್ಕಳ: ಶ್ರೀನಾರಾಯಣ ಗುರು ಜಯಂತಿಯ ಅಂಗವಾಗಿ ತಾಲೂಕಾ ನಾರಾಯಣಗುರು ಜಯಂತಿ ಆಚರಣಾ ಸಮಿತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಸಾಮಾಜಿಕ ಪರಿವರ್ತನೆಯಲ್ಲಿ ನಾರಾಯಣ ಗುರುಗಳ ಪಾತ್ರ’ ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆಯು ಇಲ್ಲಿನ ಸೋನಾರಕೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಸೋನಾರಕೇರಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಯಲ್ಲಮ್ಮ ಶ್ರೀನಾರಾಯಣಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಭಾಷಣ ಸ್ಪರ್ಧೆಯಲ್ಲಿ ಮೋನಿಕಾ ನಾಯ್ಕ (ಶ್ರೀವಲ್ಲಿ ಪ್ರೌಢಶಾಲೆ) ಪ್ರಥಮ, ಆಶಿಕಾ ನಾಯ್ಕ (ಶ್ರೀನಾರಾಯಣ ಗುರುವಸತಿ ಶಾಲೆ) ದ್ವಿತೀಯ, ಅಭಿಧಿ ಕಾಯ್ಕಿಣಿ (ವಿದ್ಯಾಭಾರತಿ ಪ್ರೌಢಶಾಲೆ) ತೃತೀಯ ಹಾಗೂ ವೈಷ್ಣವಿ ನಾಯ್ಕ (ಸೋನಾರಕೇರಿ ಪ್ರೌಢಶಾಲೆ) ಸಮಾಧಾನಕರ ಬಹುಮಾನ ಪಡೆದುಕೊಂಡರು.
ವಿಜೇತರಿಗೆ ಸೆ.10ರಂದು ಆಸರಕೇರಿಯ ವೆಂಕಟರಮಣ ಸಭಾಭವನದಲ್ಲಿ ನಡೆಯುವ ಶ್ರೀನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು ಎಂದು ಕಾರ್ಯಕ್ರಮದ ಸಂಚಾಲಕ ಮನಮೋಹನ ನಾಯ್ಕ ತಿಳಿಸಿದರು. ಗಂಗಾಧರ ನಾಯ್ಕ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಪಾಂಡುರಂಗ ನಾಯ್ಕ, ಶಿಕ್ಷಕ ನಾರಾಯಣ ನಾಯ್ಕ, ನಿರ್ಣಾಯಕರಾದ ಶಿಕ್ಷಕ ಸುರೇಶ ಮುರ್ಡೇಶ್ವರ, ಗೋಪಾಲ ನಾಯ್ಕ, ರವಿ ನಾಯ್ಕ, ಸೋನಾರಕೇರಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.