ಶಿರಸಿ: ಸಂಧ್ಯಾ ಕಾಲದಲ್ಲಿ ನಡೆಸುವ ದೇವರ ಪೂಜೆ, ಧ್ಯಾನ , ಸ್ತೋತ್ರ ಪಠಣಗಳಲ್ಲಿ ಅಥವಾ ಇನ್ನಾವುದೇ ದೇವತಾ ಕಾರ್ಯದಲ್ಲಿ ಗಡಿಬಿಡಿ, ಒತ್ತಡ ಮಾಡಿಕೊಳ್ಳದೇ ಆಚರಿಸಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ನುಡಿದರು.
ಅವರು ಬಾಳೂರು ಸೀಮೆಯ ಭಜಕರು ಸಲ್ಲಿಸಿದ ಗುರು ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿ, ನಿತ್ಯದ ದೇವರ ಧ್ಯಾನ, ಪೂಜೆಯಲ್ಲಿ ಕೂಡ ಗಡಿಬಿಡಿ ಮಾಡಿಕೊಂಡರೆ ದಿನದಲ್ಲಿ ನಡೆಸುವ ಎಲ್ಲ ಕೆಲಸವೂ ಗಡಿಬಿಡಿಯಿಂದಲೇ ಸರಿಯಾಗಿ ಆಗುವುದಿಲ್ಲ. ಒಮ್ಮೆ ದೇವರ ಪೂಜೆ ಶಾಂತವಾಗಿ ಮಾಡಿದರೆ ನಂತರದ ಕೆಲಸ ಗಡಿಬಿಡಿ ಆದರೂ ಸಮಸ್ಯೆ ಆಗದು ಎಂದು ಶ್ರೀಗಳು ವಿವರಿಸಿದರು. ಬದುಕಿನಲ್ಲಿ ಯಾವುದನ್ನು ಅನಿವಾರ್ಯ ಎಂದು ಇಟ್ಟುಕೊಳ್ಳುತ್ತೇವೋ ಅದನ್ನು ತಪ್ಪದೇ ಮಾಡುತ್ತ ಹೋಗುತ್ತೇವೆ. ಅನಿವಾರ್ಯ ಎಂಬ ಪಟ್ಟ ಹಾಕಿಕೊಂಡರೆ ಅನೇಕ ಕೆಲಸ ಮಾಡಬಹುದು. ಪರೀಕ್ಷೆ ಬಂದಾಗ ಓದುವದು ಅನಿವಾರ್ಯ. ಮಳೆ ಜೋರಾದರೆ ಅಡಿಕೆಗೆ ಮದ್ದು ಹೊಡೆಯುವದು ಅನಿವಾರ್ಯ. ಯಾವುದು ಅನಿವಾರ್ಯ ಎನಿಸುತ್ತದೋ, ಅದನ್ನು ಶತಾಯ ಗತಾಯ ಮಾಡುತ್ತೇವೆ. ಒಳ್ಳೆ ಕೆಲಸಗಳನ್ನು ಅನಿವಾರ್ಯ ಎಂದು ಹಾಕಿಕೊಳ್ಳಬೇಕು. ಇಲ್ಲವಾದರೆ ಅದು ಇದು ಕೆಲಸದಲ್ಲಿ ಕಳೆದು ಹೋಗುತ್ತದೆ ಎಂದು ವಿಶ್ಲೇಷಿಸಿದರು.
ಬೆಳಗ್ಗೆ, ಸಾಯಂಕಾಲ ಸಂಧ್ಯಾಕಾಲದಲ್ಲಿ ಪೂಜೆ, ಯೋಗಾಸನ, ಸಹಸ್ರನಾಮ, ಸ್ತೋತ್ರ ಪಠಣ ಅನಿವಾರ್ಯ ಎಂದು ಹಾಕಿಕೊಂಡರೆ ತಪ್ಪದೇ ನಡೆಯುತ್ತದೆ. ಅದಕ್ಕೆ ಉಳಿದೆಲ್ಲ ಕಾರ್ಯಕ್ರಮ ಹೊಂದಿಸಿಕೊಳ್ಳುತ್ತೇವೆ. ಅನಿವಾರ್ಯತೆ ಹಾಕಿಕೊಂಡು ಹೊಂದಿಸಿಕೊಂಡರೆ ಒಳ್ಳೆಯ ಕೆಲಸ ಆಗುತ್ತದೆ ಎಂದರು.
ನಿತ್ಯ ನಿಯಮಿತವಾಗಿ ದೇವರ ಚಿಂತನೆ ಮಾಡಿದರೆ ಉಳಿದ ಕೆಲಸ ಸಲೀಸಾಗುತ್ತದೆ. ದೇವರ ಕಾರ್ಯಗಳಿಗೆ ಒತ್ತಡ ಮಾಡಿಕೊಳ್ಳಬಾರದು ಎಂದೂ ಪುನರುಚ್ಚರಿಸಿದರು.
ಈ ವೇಳೆ ಈಶ್ವರ ಭಟ್ಟ ಹಸ್ರಗೋಡು, ಗೋಪಾಲಕೃಷ್ಣ ಹೆಗಡೆ ಕೊಡ್ನಮನೆ, ಶಾಂತಾರಾಮ ಹೆಗಡೆ ಮಸಗುತ್ತಿ ಇತರರು ಇದ್ದರು.