ಶಿರಸಿ: ಇಲ್ಲಿನ ಪ್ರತಿಷ್ಟಿತ ಸಂಸ್ಥೆ ಶತಮಾನದ ಸಂಭ್ರಮದಲ್ಲಿರುವ ಇಲ್ಲಿನ ಟಿಎಸ್ಎಸ್ ಸಂಸ್ಥೆಗೆ ಅಧ್ಯಕ್ಷರಾಗಿ ಗೋಪಾಲಕೃಷ್ಣ ವೈದ್ಯ ಮತ್ತಿಘಟ್ಟ ಹಾಗೂ ಉಪಾಧ್ಯಕ್ಷರಾಗಿ ಎಂ.ಎನ್.ಭಟ್ ತೋಟಿಮನೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗುರುವಾರ ಸಂಘದ ಆಡಳಿತ ಮಂಡಳಿ ಸಭೆ ನಡೆಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ನೂತನ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಸಂಸ್ಥೆಯ ಹಿಂದಿನ ಆಡಳಿತ ಮಂಡಳಿಯ ಅವಧಿಯಲ್ಲಿ ವ್ಯವಹಾರದಲ್ಲಿ ಶುದ್ಧತೆ ಇರಲಿಲ್ಲ. ಪ್ರಧಾನ ವ್ಯವಸ್ಥಾಪಕರ ಮರು ನೇಮಕ, ರಿಯಲ್ ಎಸ್ಟೇಟ್, ಜಮೀನು ಖರೀದಿಯಂಥ ವಿಚಾರಗಳಲ್ಲಿ ಸಾಕಷ್ಟು ಆರ್ಥಿಕ ನಷ್ಟವಾಗಿದೆ. ಅವುಗಳನ್ನು ನಿಯಂತ್ರಿಸಿ ಆರ್ಥಿಕ ಶಿಸ್ತು ತರಬೇಕಿದೆ.
ದುಂದು ವೆಚ್ಚದ ಹಿನ್ನೆಲೆಯಲ್ಲಿ ಹೆಚ್ಚುವರಿ ವಾಹನಗಳ ಮಾರಾಟ ಮಾಡಲು ಕ್ರಮವಹಿಸಲಾಗಿದೆ. ಪ್ರತ್ಯೇಕ ಸಮಿತಿ ರಚಿಸಿ ಲೆಕ್ಕ ತಪಾಸಣೆ ಮಾಡುವ ಸಂದರ್ಭವಿದ್ದು, ಆ ನಿಟ್ಟಿನಲ್ಲಿ ತಕ್ಷಣ ಕ್ರಮವಹಿಸಲಾಗುವುದು ಎಂದರು.
ಸಂಸ್ಥೆಯ ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ಯಾವ ಕ್ರಮಗಳು ಅವಶ್ಯವೋ, ಅವುಗಳನ್ನು ಕಟ್ಟುನಿಟ್ಟಾಗಿ ಕೈಗೊಂಡು ಸದಸ್ಯರ ನಿರೀಕ್ಷೆ ಹಾಗೂ ಅಪೇಕ್ಷೆಗೆ ನ್ಯಾಯ ಒದಗಿಸಲು ಪ್ರಯತ್ನ ಮಾಡುತ್ತೇವೆ ಎಂದರು.
ಯಾವುದೇ ಭೇದ-ಭಾವವಿಲ್ಲದೇ ಎಲ್ಲ ಸದಸ್ಯರಿಗೂ ಸಹಕಾರಿ ನ್ಯಾಯವನ್ನು ಒದಗಿಸಬೇಕಿದೆ. ಸದಸ್ಯರ ಪತ್ತು ವ್ಯವಹಾರಗಳನ್ನು ಪರಿಗಣಿಸಿ, ಅವರ ಮುಂದಿನ ವ್ಯವಹಾರಗಳನ್ನು ಸುಲಲಿತವಾಗಿ ನಡೆಸಲು ಯಾವ ಸಹಕಾರ ಅವಶ್ಯವೋ ಅವುಗಳನ್ನು ನ್ಯಾಯಯುತವಾಗಿ ಈಡೇರಿಸುತ್ತೇವೆ. ಯಾವುದೇ ಠೇವಣಿ ಇಟ್ಟ ಸದಸ್ಯರು, ಸಾಲಗಾರ ರೈತ ಸದಸ್ಯರು ಹಾಗೂ ವ್ಯಾಪಾರಸ್ಥರು ಆತಂಕಕ್ಕೆ ಒಳಗಾಗದೇ ನಿರ್ಭೀತಿಯಿಂದ ವ್ಯವಹಾರ ನಡೆಸಬಹುದು ಎಂದು ಹೇಳಿದರು.
ಸಂಸ್ಥೆಯ ಮೂಲ ಉದ್ದೇಶ ರೈತರಿಗೆ ಅಡಿಕೆ ಮಾರುಕಟ್ಟೆ ಒದಗಿಸುವುದಾಗಿದೆ. ಈ ವ್ಯವಸ್ಥೆ ಪರಿಣಾಮಕಾರಿಯಾಗಿ ನಿರ್ವಹಿಸಲು ಸೂಕ್ತ ತಜ್ಞರ ಪರಿಣಿತರ ಸಲಹೆ ಹಾಗೂ ಮಾರ್ಗದರ್ಶನ ಪಡೆದುಕೊಂಡು ಮಾರುಕಟ್ಟೆಯಲ್ಲಿ ಸ್ಥಿರತೆ ಕಾಪಾಡಲು ಪ್ರಯತ್ನ ಮಾಡುತ್ತೇವೆ. ಎಲ್ಲಾ ಪ್ರಾಥಮಿಕ ಸಹಕಾರಿ ಸಂಘಗಳ ಬೆಂಬಲ ಮತ್ತು ಮಾರ್ಗದರ್ಶನ ಅತ್ಯಂತ ಅವಶ್ಯವಾಗಿದೆ. ಮುಂಬರುವ ದಿನಗಳಲ್ಲಿ ಪ್ರಾಥಮಿಕ ಸಹಕಾರ ಸಂಘಗಳನ್ನು ನಮ್ಮೊಂದಿಗೆ ಜತೆಯಾಗಿ ಮುನ್ನಡೆಸುತ್ತೇವೆ ಎಂದರು. ಈ ವೇಳೆ ಸಂಘದ ಎಜಿಎಂ ವಿಜಯಾನಂದ ಭಟ್ಟ ಸೇರಿದಂತೆ ಇತರ ನಿರ್ದೇಶಕರು ಇದ್ದರು.