ಸಿದ್ದಾಪುರ: ಬಿಳಗಿಯ ಮಧುವನ ಹಾಗೂ ಜೇನುಗಾರಿಕಾ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಪಂಚಾಯತ ಉತ್ತರ ಕನ್ನಡ, ತೋಟಗಾರಿಕೆ ಇಲಾಖೆ ಸಿದ್ದಾಪುರ ಹಾಗೂ ತೋಟಗಾರಿಕೆ ಮಹಾವಿದ್ಯಾಲಯ ವಿಸ್ತರಣಾ ಶಿಕ್ಷಣ ಘಟಕ ಶಿರಸಿ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ವಲಯ ಯೋಜನೆಯಡಿ ಜೇನು ಕೃಷಿ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಮಳೆಯ ಕೊರತೆ, ಹವಾಮಾನ ವೈಪರಿತ್ಯದಿಂದ ಭತ್ತ ಹಾಗೂ ಅಡಿಕೆ ಮೇಲೆ ತುಂಬಾ ದುಷ್ಪರಿಣಾಮ ಉಂಟಾಗುತ್ತಿದ್ದು, ರೈತರು ಒಂದೇ ಬೆಳೆಗೆ ಸೀಮಿತರಾಗದೇ ವಿವಿಧ ಬೆಳೆಗಳನ್ನು ಬೆಳೆಯಬೇಕು. ಕೃಷಿಗೆ ಪೂರಕವಾಗಿರುವ ಜೇನು ಕೃಷಿಯಲ್ಲಿ ರೈತರು ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.
ಕೃಷಿಯಲ್ಲಿ ಎಲ್ಲರೂ ಶ್ರದ್ಧೆಯಿಂದ ಕೆಲಸ ಮಾಡಬೇಕು. ರೈತರು ಕೇವಲ ಒಂದು ಬೆಳೆಯನ್ನು ಮಾತ್ರ ಅವಲಂಬಿಸಿರಬಾರದು. ಜೇನುಗಾರಿಕೆ, ಮೀನುಗಾರಿಕೆ ಮುಂತಾದ ಉಪ ಕೃಷಿಗೆ ಆದ್ಯತೆ ನೀಡಬೇಕು. ನಿತ್ಯದ ಚಟುವಟಿಕೆಯ ಜತೆಗೆ ಜೇನು ಕೃಷಿಯನ್ನು ಕೈಗೊಳ್ಳಿ. ಸರ್ಕಾರದಿಂದ ಜೇನು ಕೃಷಿಗೆ ಹೆಚ್ಚಿನ ಸಹಾಯಧನ ನೀಡುತ್ತಿದ್ದು, ಕೃಷಿಕರು ಸದುಪಯೋಗ ಪಡೆದುಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು. ಮಹಿಳೆಯರು ಕೂಡ ಆಸಕ್ತಿ ವಹಿಸಿ ಜೇನು ಕೃಷಿಯಲ್ಲಿ ತೋಡಗುವಂತೆ ಕರೆ ನೀಡಿದರು.
ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಪಿ.ಸತೀಶ ಪ್ರಾಸ್ತಾವಿಕ ಮಾತನಾಡಿ, ಮಾರಣಾಂತಿಕ ರೋಗದಿಂದಾಗಿ 90ರ ದಶಕದಲ್ಲಿ ಜೇನು ಸಂತತಿ ನಾಶವಾಗಿತ್ತು. ಕ್ರಮೇಣ ಚೇತರಿಸಿಕೊಂಡಿದೆ. ತೋಟಗಾರಿಕಾ ಬೆಳೆಗಳಲ್ಲಿ ಜೇನಿನಿಂದಲೆ 80% ಪರಾಗಸ್ಪರ್ಷವಾಗುತ್ತದೆ. ಇತ್ತೀಚೆಗೆ ಜೇನು ಕೃಷಿಗೆ ಇಲಾಖೆಯಿಂದ 75% ಸಹಾಯಧನ ನೀಡಲಾಗುತ್ತಿದ್ದು, ರೈತರು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಬಿಳಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹೇಶ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಗ್ರಾ.ಪಂ ಉಪಾಧ್ಯಕ್ಷೆ ಸುವರ್ಣಾ ನಾಯ್ಕ, ಸದಸ್ಯರಾದ ವಸಂತ ನಾಯ್ಕ, ರಾಜು ನಾಯ್ಕ, ವಸಂತ ನಾಯ್ಕ, ಮಾಲಿನಿ ದೇವರಾಜ ಮಡಿವಾಳ, ಶಾರದಾ ಪುಟ್ಟಪ್ಪ ವಾಲ್ಮೀಕಿ, ಕ್ಯಾದಗಿ ಗ್ರಾಮ ಪಂಚಾಯತ ಅಧ್ಯಕ್ಷ ರಾಮಕೃಷ್ಣ ನಾಯ್ಕ, ಜಿ.ಪಂ ಮಾಜಿ ಸದಸ್ಯ ವಿ.ಎನ್.ನಾಯ್ಕ ಬೇಡ್ಕಣಿ, ಮತ್ತಿತರರು ಉಪಸ್ಥಿತರಿದ್ದರು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಅರುಣ್ ಎಚ್.ಜಿ., ಸ್ವಾಗತಿಸಿದರು. ಸಹಾಯಕ ತೋಟಗಾರಿಕೆ ನಿರ್ದೇಶಕ ಮಹಾಬಲೇಶ್ವರ ಬಿ.ಎಸ್ ನಿರೂಪಿಸಿದರು.