Slide
Slide
Slide
previous arrow
next arrow

ದೋಷ ನಿವಾರಣೆಗೆ ಯಜ್ಞ, ದಾನ, ತಪಸ್ಸು ಆಚರಿಸಬೇಕು: ಸ್ವರ್ಣವಲ್ಲಿ ಶ್ರೀ

300x250 AD

ಶಿರಸಿ: ಪ್ರತಿಯೊಬ್ಬರ ದೋಷ ನಿವಾರಣೆಗೆ ಯಜ್ಞ, ದಾನ, ತಪಸ್ಸು ಆಚರಿಸಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ‍್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಹೇಳಿದರು.

ಅವರು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಶ್ರೀಗಳು ಕೈಗೊಂಡ ಚಾತುರ್ಮಾಸ್ಯ ವ್ರತಾಚರಣೆ ಹಿನ್ನಲೆಯಲ್ಲಿ ಯಲ್ಲಾಪುರ ಸೀಮೆಯ ಶಿಷ್ಯರು ಸಲ್ಲಿಸಿದ ಗುರು ಸೇವೆ ಸ್ವೀಕರಿಸಿ ಮಾತನಾಡಿ, ನಮ್ಮೊಳಗಿನ ಕೊಳೆ ತೊಳೆಯಲು ಭಗವಂತನೇ ಮೂರು ಉತ್ತಮ ಉಪಾಯಗಳನ್ನು ನೀಡಿದ್ದಾನೆ. ಭಗವಂತನು ಹೇಳಿದ್ದು ಎಲ್ಲರೂ ಯಜ್ಞ, ದಾನ ತಪಸ್ಸು ಮಾಡಬೇಕು ಎಂದು. ಇವುಗಳನ್ನು ಯಾರೂ ಬಿಡಲು ಬರುವದಿಲ್ಲ. ತ್ಯಾಗಿಗಳೂ ಕೂಡ ಇವುಗಳನ್ನು ಮಾಡಬೇಕು ಎಂಬುದು ಭಗವಂತನ ಇಚ್ಛೆ. ವಿಧಾನ ಬೇರೆ ಇರಬಹುದು. ಆದರೆ, ಮಾಡಬೇಕು ಎಂಬುದು ಭಗವಂತನ ಆಶಯ. ತ್ಯಾಗ, ಸನ್ಯಾಸ ಎಂಬ ತಿಳಿದರೆ ಎಲ್ಲ ಬಿಡುವದು ಎಂದಲ್ಲ. ಅದರಲ್ಲಿ ಸೂಕ್ಷ್ಮ ವಿಷಯಗಳಿವೆ.  ಭಗವದ್ಗೀತೆಯಲ್ಲಿ ಭಗವಾನ್ ಕೃಷ್ಣನೇ 18ನೇ ಅಧ್ಯಾಯದಲ್ಲಿ ಹೇಳಿದ್ದಾನೆ ಎಂದರು. 

ಎಲ್ಲ ಹಂತದಲ್ಲಿ ಇವುಗಳ ಅನುಷ್ಠಾನ ಆಗಬೇಕು. ಗೃಹಸ್ಥರು, ಬ್ರಹ್ಮಚಾರಿಗಳು, ಸನ್ಯಾಸಿಗಳು ಅವರವರ ಹಿನ್ನಲೆಯಲ್ಲಿ ಮಾಡಲೇಬೇಕು. ಪವಿತ್ರೀಕರಿಸುವ ಈ ಕ್ರಿಯೆ ಮಾಡುತ್ತಲೇ ಇರಬೇಕು ಎಂದ ಶ್ರೀಗಳು,  ಜಪ, ಪೂಜೆಗಳೂ ಯಜ್ಞದಲ್ಲಿ ಬರುತ್ತವೆ. ನಿತ್ಯವೂ ಗೃಹಸ್ಥರು ಮಾಡುವ ಔಪಾಸನ, ವೈಶ್ಯದೇವ ಯಜ್ಞವೇ. ನಮ್ಮಲ್ಲಿ ಅನೇಕ ಬಗೆಯ ಪುಣ್ಯ, ಶ್ರೇಯಸ್ಸು ಕೊಡುತ್ತದೆ. ಬೆಳೆ, ಮಳೆ ಸಮೃದ್ಧಿ ಆಗುತ್ತದೆ.

ಇದರಲ್ಲಿ ದಾನ ಎರಡನೇಯದ್ದು. ದಾನವನ್ನು ತಕ್ಕಮಟ್ಟಿಗೆ ಮಾಡುತ್ತಿದ್ದಾರೆ. ಆದರೆ, ಯಜ್ಞ ತಪಸ್ಸು ಕ್ಷೀಣ ಆಗಿದೆ. ಅದರಲ್ಲೂ ತಪಸ್ಸು ಹೆಚ್ಚು ಕ್ಷೀಣ ಆಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

300x250 AD

ಹಳೆ ಪರಂಪರೆಯ ತಪಸ್ಸು ಪುಸ್ತಕದಲ್ಲಿ ಮಾತ್ರ ಉಳಿದಿದೆ. ಯಜ್ಞವೂ ಕ್ಷೀಣಿಸುತ್ತಿದೆ. ವರ್ಷಕ್ಕೊಂದು ಯಜ್ಞ್ಞವೂ ಮನೆಗಳಲ್ಲಿ ಯಾಕೆ, ಕೆಲವಡೆ ದೇವಸ್ಥಾನಗಳಲ್ಲೂ ಆಗುತ್ತ್ತಿಲ್ಲ. ಯಜ್ಞ ಅನುಷ್ಠಾನ ಮಾಡುವ ಪ್ರಯೋಗಸ್ಥರ ಸಂಖ್ಯೆ ಕೂಡ ಕಡಿಮೆ ಇದೆ ಎಂದ ಶ್ರೀಗಳು, ಮೌನ, ಉಪವಾಸ ವೃತ ಇವುಗಳೂ ತಪಸ್ಸುಗಳೇ. ಅವರವರ ಮಿತಿಯಲ್ಲಿ ಮಾಡಲು ಸಾಧ್ಯವಿದೆ. 15 ದಿನದಲ್ಲಿ ಒಂದು ದಿನ ಉಪವಾಸ, ಮೌನ ಮಾಡಬೇಕು. ಹಾಗಂತ ಅತಿಯಾದ ಉಪವಾಸ ಒಳ್ಳೆಯದು ಅಲ್ಲದಿದ್ದರೂ ಒಂದಿಷ್ಟು ಉಪವಾಸ ಉಪಯುಕ್ತ ಇದೆ. ಹೊಟ್ಟೆ ಉಬ್ಬು ರೋಗ, ಬೊಜ್ಜು ಕಡಿಮೆ ಆಗುತ್ತದೆ. ಜೀರ್ಣ ಶಕ್ತಿ ಹೆಚ್ಚುತ್ತದೆ ಎಂದೂ ಹೇಳಿದರು. 

ಈ ವೇಳೆ ನಾಗೇಶ ಹೆಗಡೆ ಪಣತಗೇರಿ, ಸುಬ್ರಹ್ಮಣ್ಯ ಭಟ್ಟ ಯಲ್ಲಾಪುರ, ಜಗದೀಶ ದೀಕ್ಷಿತ್, ರಮಾ ದೀಕ್ಷಿತ್, ಕೃಷ್ಣ ಬೋಡೆ, ಮಂಜುನಾಥ ಭಟ್ಟ ನಂದೊಳ್ಳಿ ಇತರರು ಇದ್ದರು‌.

Share This
300x250 AD
300x250 AD
300x250 AD
Back to top