ಗೋಕರ್ಣ: ಸಮಾಜದಲ್ಲಿನ ಸಾಧಕರನ್ನು ಗುರುತಿಸಿ ಗೌರವಿಸಬೇಕು ಮತ್ತು ಜನಸಾಮಾನ್ಯರ ಕಷ್ಟಕಾರ್ಪಣ್ಯಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಆವರಣದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಮಂಗಳವಾರ ಸಾಗರ ಮಂಡಲ ಕ್ಯಾಸನೂರು, ಉಳವಿ, ಕೆಳದಿ ಪೂರ್ವ ಮತ್ತು ಕೆಳದಿ ಪಶ್ಚಿಮ ವಲಯಗಳ ವತಿಯಿಂದ ಶ್ರೀಗುರುಭಿಕ್ಷಾ ಸೇವೆ ಸ್ವೀಕರಿಸಿ ಶ್ರೀಸಂದೇಶ ನೀಡಿದರು.
ಯಾವುದೇ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸಬೇಕು ಹಾಗೂ ಜನರು ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳುವ ಮುನ್ನ ನಾವೇ ಸ್ಪಂದಿಸುವAತಾಗಬೇಕು. ಬಡ ವಿದ್ಯಾರ್ಥಿಗಳಿಗೆ ನೆರವು, ಸಂಕಷ್ಟದಲ್ಲಿರುವ ಬಡ ರೋಗಿಗಳ ಚಿಕಿತ್ಸೆಗೆ ನೆರವು ಹೀಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಸಹಾಯಹಸ್ತ ಚಾಚಬೇಕು. ಅದುವೇ ಸಂಘಟನೆಯ ಮೂಲಮಂತ್ರ ಎಂದು ಅಭಿಪ್ರಾಯಪಟ್ಟರು.
ಸಮಾಜದಲ್ಲಿ ಗಣನೀಯ ಸೇವೆ ಸಲ್ಲಿಸಿದ ಉಳವಿ ವಲಯದ ಎಂ.ವಿ.ರಾಮರಾವ್, ಎಚ್.ಎನ್.ಕೇಶವ, ಕೆ.ಆರ್.ಸುಬ್ರಾಯ ಭಟ್, ಸೀತಾರಾಮಯ್ಯ, ಕೆಳದಿ ಪಶ್ಚಿಮ ವಲಯದ ಉಮೇಶ್ ಭಟ್ಟ್ ಬಿ.ಆರ್, ಬಿ.ಟಿ.ಸೋಮನ್, ಬೊ.ಆರ್.ದೇವಪ್ಪ, ಕ್ಯಾಸನೂರು ವಲಯದ ಬಿಪಿಎನ್ ವೆಂಕಟರಮಣ ಹೆಗಡೆ (ಮರಣೋತ್ತರ), ರಾಜಾರಾಂ ರಾವ್ ಹೊಸಬಾಳೆ, ಕೆ.ವಿ.ಲಕ್ಷ್ಮೀನಾರಾಯಣ ಸ್ವಾಮಿ, ಕೆ.ಎನ್.ಜಾಹ್ನವಿ, ಬಿ.ಎಂ.ಜಯರಾಮ, ಕೆಳದಿ ಪೂರ್ವ ವಲಯದ ಎಂ.ಎA.ಕೃಷ್ಣಮೂರ್ತಿ, ಕೆ.ಸಿ.ಸದಾನಂದ, ಆರ್.ರಘುನಾಥ ಭಟ್, ಮಂಜಪ್ಪ ಹೊಸಮನೆ ಅವರಿಗೆ ಶ್ರೀಗುರುಸೇವಾ ತಿಲಕ ಗೌರವ ನೀಡಿ ಸನ್ಮಾನಿಸಲಾಯಿತು.
ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಪ್ರಾಂತ್ಯ ಕಾರ್ಯದರ್ಶಿ ರುಕ್ಮಾವತಿ, ಸಾಗರ ಮಂಡಲ ಅಧ್ಯಕ್ಷ ಮುರಳಿ ಗೀಜಗಾರ್ ಮತ್ತಿತರರು ಉಪಸ್ಥಿತರಿದ್ದರು. ಸುಬ್ರಾಯ ಅಗ್ನಿಹೋತ್ರಿಗಳು ಮತ್ತು ವಿನಾಯಕ ಶಾಸ್ತ್ರಿಗಳು ಕಾರ್ಯಕ್ರಮ ನಿರೂಪಿಸಿದರು.