ಕಾರವಾರ: ಗ್ರಾಮೀಣ ಜನರು ಗುಳೆ ಹೋಗುವುದನ್ನು ತಡೆದು, ಸ್ವಂತ ಸ್ಥಳಗಳಲ್ಲಿಯೇ ಉದ್ಯೋಗ ಸೃಷ್ಟಿಸುವುದು ಹಾಗೂ ಗ್ರಾಮೀಣ ಭಾಗದಲ್ಲಿ ಆಸ್ತಿ ಸೃಜನೆ ಮಾಡುವುದು ನರೇಗಾ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಾಲೂಕು ಐಇಸಿ ಸಂಯೋಜಕಿ ಸೌಂದರ್ಯ ಕೆ. ಹೇಳಿದರು.
ಅವರು ತಾಲೂಕಿನ ಹವಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೇರವಾಡ ಗ್ರಾಮದಲ್ಲಿ ಹಮ್ಮಿಕೊಂಡ ರೋಜಗಾರ ದಿನಾಚರಣೆ ಹಾಗೂ ಮಾಹಿತಿ ವಿನಿಮಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಯೋಜನೆಯು ಅಂಗವಿಕಲರು, ವೃದ್ಧರು ಹಾಗೂ ಗರ್ಭಿಣಿಯರಿಗೆ ವಿಶೇಷ ಸವಲತ್ತುಗಳನ್ನು ನೀಡುತ್ತಿದ್ದು, ಅರ್ಧ ಕೆಲಸದ ಜೊತೆಗೆ ಪೂರ್ತಿ ಕೂಲಿಯನ್ನು ನೀಡಲಾಗುತ್ತಿದೆ ಎಂಬುದನ್ನು ತಿಳಿಸಿ ಅವರನ್ನು ಕೆಲಸಕ್ಕೆ ಬರುವಂತೆ ಪ್ರೇರೇಪಿಸಿ, ದನದ ಕೊಟ್ಟಿಗೆ, ಕೋಳಿ ಶೇಡ್ ಕುರಿ ಶೆಡ್‌ಗಳಂತಹ ವೈಯಕ್ತಿಕ ಕಾಮಗಾರಿಗಳಿಗೆ ಸಹಾಯಧನ ನೀಡಲಾಗುತ್ತಿದೆ ಕಾಮಗಾರಿಗಳನ್ನು ಕೈಗೊಳ್ಳಲು ಗ್ರಾಮ ಪಂಚಾಯತಿ ಅಡಿ ಮಾಹಿತಿ ಪಡೆದು ಅರ್ಜಿ ಸಲ್ಲಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಸ್ವಸಹಾಯ ಸಂಘದ ಸದಸ್ಯರು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.