ಕುಮಟಾ: ವಿದ್ಯಾರ್ಥಿಗಳ ಕಲಿಕೆಯಲ್ಲಿ ಶಿಕ್ಷಕರ ಜೊತೆಗೆ ಪಾಲಕರ ಜವಬ್ದಾರಿಯೂ ಅತೀ ಮುಖ್ಯ ಪ್ರಯತ್ನ ಮತ್ತು ಶೃದ್ಧೆಯಿಂದ ಎಂತಹ ವಿದ್ಯೆಯನ್ನಾದರೂ ಕರಗತ ಮಾಡಿಕೊಳ್ಳಬಹುದು ಎಂದು ಹಿರೇಗುತ್ತಿ ಹೈಸ್ಕೂಲ್ ಆಡಳಿತ ಮಂಡಳಿ ಮಹಾತ್ಮಗಾಂಧೀ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ ಎನ್ ನಾಯಕ ನುಡಿದರು.
ಅವರು ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ನಡೆದ ಪಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಈ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳ ಶಿಕ್ಷಣದ ಗುಣಮಟ್ಟ ಹಾಗೂ ಕಲಿಕೆಯಲ್ಲಿ ಮಕ್ಕಳ ಫಲಿತಾಂಶದ ಗುಣಮಟ್ಟ ಮತ್ತು ಭವಿಷ್ಯ ಹಾಗೂ ಪರೀಕ್ಷಾ ದೃಷ್ಟಿಯಿಂದಲೂ ತಮ್ಮ ಮಕ್ಕಳನ್ನು ಯಾವ ರೀತಿಯ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುವುದರ ಉದ್ದೇಶದಿಂದ ಪಾಲಕರ ಸಭೆಯನ್ನು ಆಯೋಜಿಸಿದ್ದೇವೆ ಎಂದರು.
ಹೈಸ್ಕೂಲ್ ಮುಖ್ಯಾಧ್ಯಾಪಕ ರೋಹಿದಾಸ ಎಸ್.ಗಾಂವಕರ ಮಾತನಾಡಿ, ಸುಖಾರ್ಥಿಯಾದವನು ವಿದ್ಯೆಯನ್ನು ಬಿಡಬೇಕು, ವಿದ್ಯಾರ್ಥಿಯಾದವನು ಸುಖವನ್ನು ಬಿಡಬೆಕು, ಸುಖಾರ್ಥಿಯಾದವನಿಗೆ ವಿದ್ಯೆ ಎಲ್ಲಿಂದ? ಮತ್ತು ವಿದ್ಯಾರ್ಥಿಯಾದವನಿಗೆ ಸುಖ ಎಲ್ಲಿಂದ? ಸಮಯ ಮತ್ತು ಗುರಿ ಇವೆರಡೂ ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಮುಖವಾದದ್ದು ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಮಹಾದೇವ ಬಿ.ಗೌಡ, ವಿದ್ಯೆಯನ್ನು ಯಾರು ಹೊಂದುತ್ತಾರೋ, ಅರ್ಥೈಸಿಕೊಳ್ಳುತ್ತಾರೋ ಅವರೇ ವಿದ್ಯಾರ್ಥಿಗಳು, ಪ್ರಯತ್ನ ಮತ್ತು ಶೃದ್ಧೆಯಿಂದ ಎಂತಹ ವಿದ್ಯೆಯನ್ನಾದರೂ ಕರಗತ ಮಾಡಿಕೊಳ್ಳಬಹುದು ಎಂದರು.
ಹಿರೇಗುತ್ತಿ ಬಾಲಕಿಯರ ಹಾಸ್ಟೆಲ್‌ನ ಮೇಲ್ವಿಚಾರಕರಾದ ಶ್ಯಾಮಲಾ ನಾಯ್ಕ ಮಾತನಾಡಿ, ಶಿಕ್ಷಣ ಕಾರ್ಯದಲ್ಲಿ ಬಾಲಕ- ಪಾಲಕ- ಶಿಕ್ಷಕ ಕಾಯ, ವಾಚಾ, ಮನಸ್ಸಾ ತೊಡಗಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳು ಯಶಸ್ಸು ಪಡೆಯಲು ಸಾಧ್ಯ. ನಾನು ಕಲಿತ ಹೈಸ್ಕೂಲ್ ಆಧುನಿಕತೆಗೆ ತಕ್ಕಂತೆ ಶಿಕ್ಷಣ ನೀಡುತ್ತಿರುವುದು ನನಗೆ ತುಂಬಾ ಹೆಮ್ಮೆ ಅನಿಸಿದೆ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಪಾಲಕ ಪ್ರತಿನಿಧಿಗಳಾದ ಹೊನ್ನಪ್ಪ ನಾಯಕ ಮೊಗಟಾ, ಸುಬ್ರಾಯ ನಾಯಕ, ಸುಜಾತಾ ಪಡ್ತಿ, ಶಿಕ್ಷಕರಾದ ಬಾಲಚಂದ್ರ ಹೆಗಡೇಕರ, ವಿಶ್ವನಾಥ ಬೇವಿನಕಟ್ಟಿ, ನಾಗರಾಜ ನಾಯಕ, ಬಾಲಚಂದ್ರ ಅಡಿಗೋಣ, ಇಂದಿರಾ ನಾಯಕ, ಶಿಲ್ಪಾ ನಾಯಕ, ಜಾನಕಿ ಗೊಂಡ, ಮದನ ನಾಯಕ, ಕವಿತಾ ಅಂಬಿಗ ಉಪಸ್ಥಿತರಿದ್ದರು. ಚೈತನ್ಯ ಸಂಗಡಿಗರು ಸ್ವಾಗತಗೀತೆ ಹಾಡಿದರು. ಎನ್.ಡಿ ನಂದನಕುಮಾರ ಸ್ವಾಗತಿಸಿದರು. ಶಿವಪ್ರಸಾದ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಪ್ರೀತಿ ನಾಯಕ ವಂದಿಸಿದರು. ಗೋಪಾಲಕೃಷ್ಣ ಗುನಗಾ ಹಾಗೂ ಗೋವಿಂದ ನಾಯ್ಕ ಸಹಕರಿಸಿದರು. ಎಲ್ಲಾ ವಿದ್ಯಾರ್ಥಿಗಳ ಪಾಲಕ ಪೋಷಕರು ಹಾಜರಿದ್ದರು.