ಯಲ್ಲಾಪುರ: ಚಾಲಕರ ಬದುಕಿನ ಕಷ್ಟಗಳೇನು ಎಂಬುದು ಚಾಲಕನಾಗಿ ಅನುಭವ ಹೊಂದಿನ ನಾನು ಅರಿತಿದ್ದೇನೆ. ಸಮಾಜಕ್ಕಾಗಿ ತಮ್ಮ ಜೀವವನ್ನು ಪಣಕ್ಕಿಟ್ಟು ಕಾರ್ಯನಿರ್ವಹಿಸುವ ಚಾಲಕರ ಶ್ರಮವನ್ನು ಸಮಾಜ ಗುರುತಿಸಿ, ಗೌರವಿಸಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ಪಟ್ಟಣದ ಅಡಕೆ ಭವನದಲ್ಲಿ ಶಿರಸಿಯ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಿಕ್ಷಾ ಚಾಲಕ-ಮಾಲಕರಿಗೆ ಸಮವಸ್ತ್ರ, ಪಾಸಿಂಗ್ ಯೋಜನೆ ಹಾಗೂ ಪ್ರಿಂಟಿಂಗ್ ಹುಡ್ ವಿತರಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಮಾತನಾಡಿ, ಸಿದ್ಧಗಂಗಾ ಶ್ರೀಗಳು, ಪುನೀತರಾಜಕುಮಾರ ಅವರು ಎಲೆಮರೆಯ ಕಾಯಿಯಂತೆ ಮಾಡಿದ ಸೇವೆಯ ಪ್ರೇರಣೆಯಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಆಟೊ ಚಾಲಕರಿಗೆ ವಿಮಾ ಯೋಜನೆ ಜಾರಿಗೆ ತರುವ ಉದ್ದೇಶ ಹೊಂದಿದ್ದೇವೆ ಎಂದರು.
ಮಾಜಿ ಶಾಸಕ ವಿ.ಎಸ್. ಪಾಟೀಲ, ವರ್ತಕ ಡಿ.ಶಂಕರ ಭಟ್ಟ, ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ಉತ್ತರಕನ್ನಡ ಆಟೊ ಚಾಲಕರ ಸಂಘದ ಅಧ್ಯಕ್ಷ ಶಿವರಾಜ ಮೆಸ್ತಾ, ಬಸವೇಶ್ವರ ಗೂಡ್ಸ್ ರಿಕ್ಷಾ ಮಾಲಕರ ಸಂಘದ ಸಂತೋಷ ನಾಯ್ಕ, ಉದ್ಯಮಿ ಬಾಲಕೃಷ್ಣ ನಾಯಕ, ಸಂಸ್ಥೆಯ ಮಹಾಬಲೇಶ್ವರ ಹೆಗಡೆ, ಶಾರದಾ ಹೆಗಡೆ ಇತರರಿದ್ದರು. 10 ಆಟೊ ಚಾಲಕ ದಂಪತಿಗಳನ್ನು ಗೌರವಿಸಲಾಯಿತು. ನಯನಾ ಭಟ್ ಪ್ರಾರ್ಥಿಸಿದರು. ಗಿರಿಧರ ಕಬ್ನಳ್ಳಿ ನಿರ್ವಹಿಸಿದರು.