Slide
Slide
Slide
previous arrow
next arrow

ಸರಿಯಾಗಿ ವೈದ್ಯಕೀಯ ಸೇವೆ ನೀಡದಿದ್ದರೆ ವರ್ಗಾವಣೆಯ ಎಚ್ಚರಿಕೆ ನೀಡಿದ ದೇಶಪಾಂಡೆ

300x250 AD

ಹಳಿಯಾಳ: ಪಟ್ಟಣದ ತಾಲೂಕ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ತಾಲೂಕ ಆಸ್ಪತ್ರೆಯ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಜನಸೇವೆಯ ಪಾಠವನ್ನು ಭೋದಿಸುತ್ತ, ಸರಿಯಾಗಿ ಸೇವೆ ಸಲ್ಲಿಸದಿದ್ದರೆ ವರ್ಗಾವಣೆಯ ತಲೆದಂಡ ನಿಶ್ಚಿತ ಎಂದು ಶಾಸಕ ಆರ್.ವಿ.ದೇಶಪಾಂಡೆ ಎಚ್ಚರಿಸಿದ್ದಾರೆ.

ತಾಲೂಕ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ಜನರೊಂದಿಗೆ ಮತ್ತು ಮಹಿಳೆಯರೊಂದಿಗೆ ಗೌರವದಿಂದ ವ್ಯವಹರಿಸಿರಿ, ಗಂಭೀರ ಪ್ರಕರಣವಾಗಿದ್ದರೆ ಅಥವಾ ಅವಶ್ಯಕವಾಗಿದ್ದರೆ ಮಾತ್ರ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಶಿಫಾರಸು ಮಾಡಿ. ಪವಿತ್ರ ವೈದ್ಯ ಸೇವೆ ಹಣಗಳಿಸುವ ಬ್ಯುಸಿನೆಸ್ ವೃತ್ತಿಯನ್ನಾಗಿಸಿಕೊಂಡಿದ್ದೀರಿ ಎಂದು ಕಿಡಿಕಾರಿದ ಅವರು, ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ವೈದ್ಯರು ಖಾಸಗಿ ಕ್ಲಿನಿಕ್ ನಡೆಸಬಹುದೇ? ಎಂದು ಶಾಸಕ ದೇಶಪಾಂಡೆ ತಾಲೂಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರಮೇಶ ಕದಂ ಅವರನ್ನು ಪ್ರಶ್ನಿಸಿದರು.
ಅದಕ್ಕೆ ಉತ್ತರಿಸಿದ ಡಾ.ಕದಂ ಅವರು ಆರೋಗ್ಯ ಇಲಾಖೆಯ ಪರವಾನಗಿ ಪಡೆದು ಸರ್ಕಾರಿ ವೈದ್ಯರು ತಮ್ಮ ಸೇವಾವಧಿ ಮುಗಿದ ನಂತರ ಖಾಸಗಿ ಕ್ಲಿನಿಕ್ ನಡೆಸಬಹುದು ಎಂದು 2018ರ ಸರ್ಕಾರದ ಸುತ್ತೋಲೆಯಲ್ಲಿ ಆದೇಶಿಸಲಾಗಿದೆ ಎಂದರು. ಡಾ.ಕದಂ ಉತ್ತರ ಕೇಳಿ ಅಸಮಾಧಾನಗೊಂಡ ಶಾಸಕರು, ಖಾಸಗಿ ಕ್ಲಿನಿಕ್‌ನ್ನು ಯಾರೆಲ್ಲ ನಡೆಸುತ್ತಿದ್ದಾರೆಂದು ಸಭೆಯಲ್ಲಿದ್ದ ಆಸ್ಪತ್ರೆಯ ವೈದರನ್ನು ವಿಚಾರಿಸಿ, ಸಭೆಯಲ್ಲಿದ್ದ ಮಹಿಳಾ ವೈದ್ಯರ ಸೇವೆ ಹಾಗೂ ವರ್ತನೆಯ ಬಗ್ಗೆ ತೀವ್ರ ಗರಂ ಆದ ದೇಶಪಾಂಡೆ, ವೈದ್ಯೆಯನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರ ನಿಮಗೆ ಉತ್ತಮ ಸಂಬಳವನ್ನು ನೀಡುತ್ತಿರುವಾಗ ಖಾಸಗಿ ಕ್ಲಿನಿಕ್ ನಡೆಸುವ ಅವಶ್ಯಕತೆಯಾದರೂ ಏನು? ಎಂದು ಪ್ರಶ್ನಿಸಿದರು. ಖಾಸಗಿ ಕ್ಲಿನಿಕ್ ಬಗ್ಗೆ ವೈದ್ಯರು ತಾಳುತ್ತಿರುವ ಆಸಕ್ತಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಗುಣಮಟ್ಟದ ಸೇವೆಯು ದೊರೆಯುತ್ತಿಲ್ಲ ಎಂದರು.

ಎಲ್ಲಾ ವೃತ್ತಿಗಳಲ್ಲಿಯೇ ಪವಿತ್ರ ವೃತ್ತಿ ಸೇವೆ ನಿಮ್ಮದಾಗಿದೆ ಎಂದ ದೇಶಪಾಂಡೆ, ಸಮಾಜವು ವೈದ್ಯರನ್ನು ಗೌರವದಿಂದ ಕಾಣುತ್ತಿದೆ, ಹೀಗಿರುವಾಗ ವೈದ್ಯರು ಹಣದ ಹಪಾಹಪಿತನದಿಂದ ಪವಿತ್ರ ಸೇವಾವೃತ್ತಿಯನ್ನು ವ್ಯಾಪಾರಿ ಬಿಜನೆಸ್ ಆಗಿ ಪರಿವರ್ತಿಸಿದ್ದೀರಿ. ಹಣದ ಹಿಂದೆ ಬಿದ್ದಿರುವ ನಿಮಗೆ ಜನಸೇವೆಯು ಅರ್ಥವಾಗುತ್ತಿಲ್ಲ. ಗಡಿಯಾರದ ಮುಳ್ಳನ್ನು ನೋಡಿ ಡ್ಯೂಟಿ ಮಾಡುವ ವೃತ್ತಿ ನಿಮ್ಮದಲ್ಲ, ದಿನದ ಇಪ್ಪತ್ತನಾಲ್ಕು ಗಂಟೆ ಸೇವೆ ಸಲ್ಲಿಸಲು ನೀವು ಸಿದ್ಧರಾಗಿರಬೇಕು. ತಾಲೂಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ವೈದ್ಯರು ಕೇಂದ್ರ ಸ್ಥಾನದಲ್ಲಿಯೇ ವಾಸಿಸಬೇಕು. ರಾತ್ರಿ ಪಾಳಿಯಲ್ಲಿ ಡ್ಯೂಟಿ ಮಾಡುವ ವೈದ್ಯರ ಹೆಸರು ಹಾಗೂ ಅವರ ಮೊಬೈಲ ಸಂಖ್ಯೆಯನ್ನು ಕಡ್ಡಾಯವಾಗಿ ಆಸ್ಪತ್ರೆಯ ಸೂಚನಾ ಫಲಕದಲ್ಲಿ ಹಾಕಬೇಕೆಂದರು.
ತಾಲೂಕ ಆಸ್ಪತ್ರೆಯಲ್ಲಿನ ವೈದ್ಯರ ಸೇವಾ ಲೋಪಗಳು ಹಾಗೂ ಇನ್ನಿತರ ಕೊರತೆಯನ್ನು ಪ್ರಶ್ನಿಸಿ ಆ.18ರಂದು ಪ್ರತಿಭಟನೆಗೆ ಕರೆ ನೀಡಿರುವ ದಲಿತ ಸಂಘರ್ಷ ಸಮಿತಿ( ಕೆಂಪು ಸೇನೆ)ಯ ಪದಾಧಿಕಾರಿಗಳ ಅಹವಾಲನ್ನು ಶಾಸಕ ದೇಶಪಾಂಡೆ ಆಲಿಸಿದರು. ಸಭೆಯಲ್ಲಿದ್ದ ವೈದ್ಯರನ್ನು ಹಾಗೂ ಸಿಬ್ಬಂದಿಗಳನ್ನು ಸರಿಯಾಗಿ ಸೇವೆ ಸಲ್ಲಿಸುವಂತೆ ತಾಕೀತು ಮಾಡಿದರು. ಪ್ರತಿಭಟನೆಗೆ ಕರೆ ನೀಡಿದ ಸಂಘಟನೆಯ ಬಹುತೇಕ ಸಮಸ್ಯೆಗಳನ್ನು ಸಭೆಯಲ್ಲಿ ಚರ್ಚಿಸಿ ಇತ್ಯರ್ಥ ಪಡಿಸಿದರು. ಚಿಕಿತ್ಸೆಗೆ ಬರುವ ಸಾರ್ವಜನಿಕರೊಂದಿಗೆ ಉದ್ದಟತನದಿಂದ ವರ್ತಿಸಬಾರದು. ನಿಮ್ಮ ಹುದ್ದೆಯ ಗತ್ತನ್ನು ಪ್ರದರ್ಶಿಸಲು ಹೋಗಬೇಡಿ ಎಂದು ವೈದ್ಯರಿಗೆ ಮತ್ತು ಸಿಬ್ಬಂದಿಗಳಿಗೆ ಎಚ್ಚರಿಸಿದರು.

300x250 AD

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ್, ಪ್ರಭಾರ ತಹಶೀಲ್ದಾರ ರತ್ನಾಕರ ಜಿ.ಕೆ., ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಸುರೇಶ ಶಿಂಗೆ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಉಮೇಶ ಬೊಳಶೆಟ್ಟಿ, ರವಿ ತೋರಣಗಟ್ಟಿ, ಪುರಸಭೆ ಮಾಜಿ ಉಪಾಧ್ಯಕ್ಷೆ ಸುವರ್ಣ ಮಾದರ ಇದ್ದರು.

Share This
300x250 AD
300x250 AD
300x250 AD
Back to top