ಶಿರಸಿ: ಪರಿಸರ ಜಾಗೃತೆ ಮತ್ತು ಅರಣ್ಯ ಸಾಂದ್ರತೆ ಹೆಚ್ಚಿಸುವಿಕೆಯ ಉದ್ದೇಶದಿಂದ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಹಮ್ಮಿಕೊಂಡ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನವು ಜಿಲ್ಲೆಯ 167 ಗ್ರಾಮ ಪಂಚಾಯತ ವ್ಯಾಪ್ತಿಯ, ಸುಮಾರು 803 ಹಳ್ಳಿಗಳಲ್ಲಿ, ಸುಮಾರು 41 ಸಾವಿರ ಕುಟುಂಬಗಳಿಂದ, 2 ಲಕ್ಷಕ್ಕೂ ಮಿಕ್ಕಿ ಅರಣ್ಯವಾಸಿಗಳು ಗಿಡ ನೆಟ್ಟಿ ದಾಖಲಾರ್ಹ ಕಾರ್ಯ ಜರುಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಜುಲೈ 31ರಿಂದ ಪ್ರಾರಂಭವಾದ ಲಕ್ಷ ವೃಕ್ಷ ಗಿಡ ನೆಡುವ ಕಾರ್ಯಕ್ರಮವು ಜಿಲ್ಲಾದ್ಯಂತ ಆ.14ರವರೆಗೆ ಅಭಿಯಾನದ ಸಮಗ್ರ ವರದಿ ಬಿಡುಗಡೆಗೊಳಿಸುತ್ತಾ ಅವರು ತಿಳಿಸಿದರು.
ಅರಣ್ಯವಾಸಿಗಳು ಅರಣ್ಯ ಪ್ರದೇಶದಲ್ಲಿ ಮಾವು, ಹಲಸು, ನೆರಳೆ, ಉಪ್ಪಾಗೆ, ಸಿಲ್ವರ್, ಚಿಕ್ಕು, ಗೇರು, ಸಾಗುವನಿ, ಪೇರಲೆ, ಮುರುಗಲು ಮುಂತಾದ ಗಿಡಗಳನ್ನು ಹೆಚ್ಚಿನ ಆಸಕ್ತಿಯಿಂದ ನೆಟ್ಟಿರುವುದು. ಈ ಪ್ರಕ್ರಿಯೆಯಲ್ಲಿ ಮಹಿಳೆಯರು ಮತ್ತು ಕುಟುಂಬದ ಹಿರಿಯರಾದ ವೃದ್ಧರು ಸಹಿತ ವಿಶೇಷ ಆಸಕ್ತಿಯಿಂದ ಗಿಡ ನೆಡುವ ಕಾರ್ಯದಲ್ಲಿ ಭಾಗಿಯಾಗಿರುವುದು ಅಭಿಯಾನದ ಮಹತ್ವವನ್ನು ಹೆಚ್ಚಿಸಿದೆ. ಅರಣ್ಯವಾಸಿಗಳ ಮನೆ ಮನೆಗಳಲ್ಲಿ ಸಮಾರೋಪಯಾದಿಯಾಗಿ ಗಿಡ ನೆಡುವ ಕಾರ್ಯದಲ್ಲಿ ಪಾಲ್ಗೊಂಡಿರುವುದು ಗಮನಾರ್ಹ ಅಂಶ ಎಂದು ಹೇಳಿದರು.
ಶಿರಸಿ-ಸಿದ್ದಾಪುರದಲ್ಲಿ ಅತೀ ಹೆಚ್ಚು ಸಸಿ:
ಜಿಲ್ಲಾದ್ಯಂತ ಗಿಡ ನೆಡುವ ಕಾರ್ಯ ಯಶಸ್ವಿಯಾಗಿ ಜರುಗಿದಾಗಿಯೂ, ಅತೀ ಹೆಚ್ಚು ಶಿರಸಿ-ಸಿದ್ಧಾಪುರ ತಾಲೂಕಿನಲ್ಲಿ ತಲಾ 25 ರಿಂದ 35 ಸಾವಿರಕ್ಕಿಂತ ಹೆಚ್ಚು ಗಿಡಗಳನ್ನು ನೆಟ್ಟಿರುವುದು ವಿಶೇಷವಾಗಿದೆ ಎಂದು ರವೀಂದ್ರ ನಾಯ್ಕ ಹೇಳಿದರು.
ಅಭಿಯಾನ 8 ದಿನ ಮುಂದುವರಿಕೆ:
ಜಿಲ್ಲೆಯ ಕೆಲವು ಭಾಗಗಳಲ್ಲಿ ಮಳೆಯ ಕೊರತೆಯಿಂದ, ಗಿಡ ನೆಡಲು ಅನಾನೂಕೂಲತೆ ಉಂಟಾಗಿರುವುದರಿಂದ ಅಭಿಯಾನ ಮುಂದುವರೆಸಲು ಹೋರಾಟಗಾರ ಪ್ರಮುಖರ ಅಭಿಪ್ರಾಯದ ಮೇರೆಗೆ ಅರಣ್ಯವಾಸಿಗಳು ಸಾಗುವಳಿ ಅರಣ್ಯ ಪ್ರದೇಶದಲ್ಲಿ ಗಿಡ ನೆಡುವ ಅಭಿಯಾನವನ್ನು ಆ.20 ರವರೆಗೆ ಮುಂದುವರೆಸಲಾಗಿದೆ. ಈ ಅವಧಿಯಲ್ಲಿ ಇನ್ನೂ ಹೆಚ್ಚಿನ ಗಿಡಗಳನ್ನು ನೆಡಲು ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಅರಣ್ಯವಾಸಿಗಳಿಗೆ ಕರೆ ನೀಡಿದ್ದಾರೆ.