ಕುಮಟಾ: ತಾಲೂಕಿನ ಮೂರೂರು ಕಲ್ಲಬ್ಬೆಯ ವಿದ್ಯಾನಿಕೇತನ ಸಂಸ್ಥೆಯ ಪ್ರಗತಿ ವಿದ್ಯಾಲಯದಲ್ಲಿ ಕೌಶಲ್ಯಾಭಿವೃದ್ಧಿ ಘಟಕದ ವತಿಯಿಂದ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟನೆಗೊಂಡಿತು.
ತರಬೇತಿ ಕೇಂದ್ರವನ್ನು ಉದ್ಘಾಟಿಸಿದ ಬೆಂಗಳೂರಿನ ಉದ್ಯಮಿ ಜಾಸ್ಮಿನ್ ಪ್ರೈವೇಟ್ ಲಿ.ನ ಎಂಡಿ ವಿದ್ಯಾಧರ ಹೆಗಡೆ ಮಾತನಾಡಿ, ಮನುಷ್ಯ ಇಂದು ಸ್ವಾವಲಂಬಿ ಬದುಕನ್ನು ಹೊಂದಬೇಕಾಗಿದೆ. ದೇಶದ ಅಭಿವೃದ್ಧಿಯ ದೃಷ್ಟಿಯಿಂದ ವಿವಿಧ ರೀತಿಯ ಕೌಶಲ್ಯಗಳನ್ನು ಅಳವಡಿಸಿಕೊಂಡು, ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕಾಗಿದೆ. ಮೀನನ್ನು ಆಹಾರವಾಗಿ ಸೇವಿಸುವ ಜನರಿಗೆ ಮೀನನ್ನು ಪುಕ್ಕಟೆಯಾಗಿ ನೀಡುವ ಬದಲು ಮೀನನ್ನು ಹಿಡಿಯುವ ಕಲೆಯನ್ನು ಹೇಳಿಕೊಟ್ಟರೆ ಅದು ಜೀವನಕ್ಕೆ ಉಪಯೋಗವಾಗಬಲ್ಲದು. ಅವರು ಸ್ವಾವಲಂಬಿ ಬದುಕನ್ನು ಹೊಂದಬಹುದು, ಅಂತಹ ಜೀವನದ ಕೌಶಲ್ಯವನ್ನು ರೂಢಿಸಿಕೊಳ್ಳಲು ಕರೆ ನೀಡಿದರು ಅಲ್ಲದೇ ಕೌಶಲ್ಯ ಅಭಿವೃದ್ಧಿಗೆ ತನ್ನಿಂದ ಪೂರ್ಣ ಸಹಕಾರದ ಜೊತೆಗೆ ಈ ತರಬೇತಿ ಯಶಸ್ವಿಯಾಗಲು ಬೇಕಾದ ಹೊಲಿಗೆ ಯಂತ್ರಗಳನ್ನು ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾನಿಕೇತನ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಆರ್. ಜಿ .ಭಟ್ಟ ಮಾತನಾಡಿ, ಜೀವನ ಶಿಕ್ಷಣದ ಭಾಗವಾಗಿ ಕೌಶಲ್ಯ ಅಭಿವೃದ್ಧಿ ಘಟಕದ ಅಡಿಯಲ್ಲಿ ಈ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟನೆಯಾಗಿದೆ. ಪ್ರತಿಯೊಬ್ಬರೂ ಶ್ರದ್ಧೆಯಿಂದ ಈ ಕೌಶಲ್ಯವನ್ನು ರೂಢಿಸಿಕೊಂಡು ಭವಿಷ್ಯದಲ್ಲಿ ಒಳ್ಳೆಯ ನಾಗರಿಕರಾಗಿ ಬದುಕುವಂತೆ ಕರೆ ನೀಡಿದರು.
ವೇದಿಕೆಯ ಮೇಲೆ ವಿದ್ಯಾನಿಕೇತನ ಸಂಸ್ಥೆಯ ಸದಸ್ಯರಾದ ಜಿ.ವಿ.ಹೆಗಡೆ, ಪ್ರಗತಿ ಪಿ.ಯು ಕಾಲೇಜಿನ ಪ್ರಾಚಾರ್ಯರಾದ ಜಿ.ಎಂ ಭಟ್ಟ, ಶಾಲಾ ಮುಖ್ಯಾಧ್ಯಾಪಕ ವಿ.ಎಸ್.ಗೌಡ, ಉದ್ಯಮಿ ಗೋವಿಂದ ಭಟ್ಟ, ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ಭಾಗವತ್ ಮತ್ತು ಎನ್.ಟಿ.ನಾಯ್ಕ್ ಉಪಸ್ಥಿತರಿದ್ದರು.