ಕಾರವಾರ: ಪ್ರತಿ ಸಮಸ್ಯೆಗಳಿಗೂ ಆತ್ಮಹತ್ಯೆಯೇ ಅಂತಿಮ ಪರಿಹಾರವಲ್ಲ. ಒಳ್ಳೆಯ ದಿನಗಳು ಬರಲಿದೆ, ಗುತ್ತಿಗೆದಾರರು ಬಲಹೀನರಾಗಬಾರದು ಎಂದು ಕಾರವಾರ ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಕಿವಿಮಾತು ಹೇಳಿದ್ದಾರೆ.
ಬಿಬಿಎಂಪಿಯಲ್ಲಿ ಗೌತಮ್ ಎಂಬ ಯುವ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಕೇಳಿ ದಿಗ್ಭ್ರಾಂತನಾದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯ ಕಾಮಗಾರಿಗಳ ಬಿಲ್ ಪಾವತಿಯಾಗದೆ ಗುತ್ತಿಗೆದಾರರೆಲ್ಲ ನೆಲ ಕಚ್ಚಿ ಹೋಗಿದ್ದಾರೆ. ಈಗ ಸುಧಾರಿಸಿಕೊಳ್ಳುವ ಸಮಯ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೇಲೆ ಭರವಸೆ ಇದ್ದು, ಸ್ವಲ್ಪ ದಿನ ಕಾಯೋಣ. ಒಳ್ಳೆಯ ದಿನಗಳು ಶೀಘ್ರವೇ ಬರಲಿದೆ ಎಂದಿದ್ದಾರೆ.
ಯಾರೂ ಕೂಡ ಆತ್ಮಹತ್ಯೆಯಂಥ ಕೃತ್ಯಕ್ಕೆ ಕೊರಳೊಡ್ಡಬಾರದು. ಆತ್ಮಹತ್ಯೆ ಮಾಡಿಕೊಂಡವರು ಸತ್ತು ನೆಮ್ಮದಿಯಿಂದಿರಬಹುದು ಎಂದು ಕೊಂಡಿರಬಹುದು. ಆದರೆ ಅವರನ್ನೇ ನಂಬಿಕೊಂಡವರು ಬೀದಿಗೆ ಬರುತ್ತಾರೆ. ಯಾವುದು ಆಗಬಾರದೆಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೋ, ಅದೇ ಘಟನೆ ಘಟಿಸಲಿದೆ. ಹೀಗಾಗಿ ದುಡುಕಬೇಡಿ, ಮುಂದಿನ ದಿನಗಳಲ್ಲಿ ಎಲ್ಲರೂ ಸೇರಿ ನಮ್ಮೆಲ್ಲರ ಒಳಿತಾಗಿ ಪ್ರಯತ್ನ ಮಾಡೋಣ ಎಂದು ಗುತ್ತಿಗೆದಾರರಿಗೆ ಕಿವಿಮಾತು ಹೇಳಿದ್ದಾರೆ.