ಸಿದ್ದಾಪುರ: ಪೌರಾಡಳಿತ ನಿರ್ದೇಶನಾಲಯದ ನಿರ್ದೇಶನದಂತೆ ಪ್ಲಾಸ್ಟಿಕ್ ಮುಕ್ತ ಅಭಿಯಾನದಡಿ ಪೌರಕಾರ್ಮಿಕರಿಗೆ ಮತ್ತು ವ್ಯಾಪಾರಸ್ಥರಿಗೆ ಪ್ಲಾಸ್ಟಿಕ್ ನಿಷೇಧ ಕುರಿತು ಜಾಗೃತಿ ಕಾರ್ಯಕ್ರಮ ಪಟ್ಟಣ ಪಂಚಾಯತಿಯಲ್ಲಿ ನಡೆಯಿತು. ಪಟ್ಟಣ ಪಂಚಾಯತ್ ಉಪಾಧ್ಯಕ್ಷ ರವಿಕುಮಾರ್ ನಾಯ್ಕ ಮಾತನಾಡಿ, ನಾವುಗಳು ಮುಂದಿನ ಪೀಳಿಗೆಗಾಗಿ ಉತ್ತಮ ಪರಿಸರವನ್ನು ಉಳಿಸಬೇಕಾಗಿದೆ ಆ ನಿಟ್ಟಿನಲ್ಲಿ ನಮ್ಮ ಹೋರಾಟ ನಡೆಯಬೇಕಿದೆ ಪ್ಲಾಸ್ಟಿಕ್ ನಿಲ್ಲಿಸಬೇಕು ಪ್ಲಾಸ್ಟಿಕ್ ಬಳಕೆಯು ಪರಿಸರ ಅಸಮತೋಲನಕ್ಕೆ ಕಾರಣವಾಗಿದೆ ನಮ್ಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಾದರೂ ಪ್ಲಾಸ್ಟಿಕ್ ನಿಷೇಧವಾಗಲಿ. ಆ ಮೂಲಕ ನಾವು ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳೋಣ ಎಂದರು.
ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷ ವಿನಯ ಹೊನ್ನೆಗುಂಡಿ ಮಾತನಾಡಿ ಪ್ಲಾಸ್ಟಿಕ್ ದುಷ್ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಹಂತ ಹಂತವಾಗಿ ನಿಷೇಧಿಸಬೇಕು ಎಂದರು. ವಿಜಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕರಾದ ಶಿವಶಂಕರ್ ಎನ್ ಕೆ ಮಾತನಾಡಿ ಪ್ಲಾಸ್ಟಿಕ್ ನಿಷೇಧ ಕೇವಲ ಅಂಗಡಿ ಕಾರರದಲ್ಲ ಪ್ರತಿಯೊಬ್ಬರ ಮನೆ ಮನಗಳಲ್ಲಿ ಪ್ಲಾಸ್ಟಿಕ್ ಬಳಕೆ ತಟ್ಟೆಗಟ್ಟುವ ಕಾರ್ಯವಾಗಬೇಕು ಅಂದಾಗ ಮಾತ್ರ ಪ್ಲಾಸ್ಟಿಕ್ ನಿಷೇಧಕ್ಕೆ ಒಂದು ಅರ್ಥ ಬರುತ್ತದೆ. ಸಾಮಗ್ರಿಗಳನ್ನು ಒಯ್ಯಲು ಬರುವವರು ಪರಿಸರಕ್ಕೆ ಪೂರಕವಾದ ಕೈ ಚೀಲಗಳನ್ನು ಬಳಸುವುದು ಸೂಕ್ತ ಎಂದರು.
ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಐ.ಜಿ.ಕುನ್ನೂರ್ ಮಾತನಾಡಿ ಏಕರೂಪ ಬಳಕೆ ಪ್ಲಾಸ್ಟಿಕನ್ನು ನಮ್ಮ ರಾಜ್ಯದಲ್ಲಿ ನಿಷೇಧಿಸಲಾಗಿದೆ ಹೊರ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಪ್ಲಾಸ್ಟಿಕ್ ಸರಬರಾಜು ಆಗುತ್ತಿದೆ ಪ್ಲಾಸ್ಟಿಕ್ ನಿಂದ ಆಗುವ ದುಷ್ಪರಿಣಾಮಗಳ ಕುರಿತು ಎಚ್ಚೆತ್ತುಕೊಳ್ಳಬೇಕಾದುದು ಪ್ರತಿಯೊಬ್ಬರ ಕರ್ತವ್ಯ ಅಂದರು. ಪಂಚಾಯತ್ ಸದಸ್ಯರುಗಳಾದ ಸುಧೀರ್ ಕೊಂಡ್ಲಿ ವೆಂಕೋಬ ಉಪಸ್ಥಿತರಿದ್ದರು. ಪ್ಲಾಸ್ಟಿಕ್ ಬಳಕೆ ಹಾಗೂ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಕಡಕೇರಿಯ ಈಶ್ವರ ಕಲಾ ತಂಡ ಪಟ್ಟಣ ಪಂಚಾಯಿತಿ, ಸಿದ್ಧಿವಿನಾಯಕ ಪ್ರೌಢ ಶಾಲೆ,ಬಸ್ ನಿಲ್ದಾಣ, ಹಾಗೂ ತರಕಾರಿ ಮಾರುಕಟ್ಟೆಯಲ್ಲಿ ಬೀದಿ ನಾಟಕ ಪ್ರದರ್ಶನ ಮಾಡಿದರು. ಪಟ್ಟಣ ಪಂಚಾಯಿತಿಯ ರಮೇಶ್ ಪ್ರತಿಜ್ಞಾವಿಧಿ ಬೋಧಿಸಿದರು. ಆರೋಗ್ಯ ಅಧಿಕಾರಿ ಲಕ್ಷ್ಮೀ ನಾಯ್ಕ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.