ಶಿರಸಿ: ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಐಕ್ಯೂಎಸಿ ಸಹಯೋಗದಲ್ಲಿ, ಭೂಮಿಕ ಪೋರಂನಿಂದ ಮಹಾವಿದ್ಯಾಲಯದ ಹೆಣ್ಣು ಮಕ್ಕಳಿಗಾಗಿ ನೈಸರ್ಗಿಕ ವಸ್ತುಗಳಿಂದ ಸೌಂದರ್ಯ ವರ್ಧನೆ ಎನ್ನುವ ವಿಷಯದ ಕುರಿತಾಗಿ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಚಾರ್ಯ ಡಾ. ಟಿ.ಎಸ್. ಹಳೆಮನೆ ಮೇಕಪ್ ಮಾಡುವುದು ಕೂಡ ಕೌಶಲ್ಯಯುತವಾದ ಕಲೆಯಾಗಿದ್ದು ಪಠ್ಯೇತರ ಚಟುವಟಿಕೆಯಾಗಿದೆ. ಇದರಲ್ಲಿ ತರಬೇತಿಯನ್ನು ನೀವು ಹೊಂದಿ ಕೌಶಲ ವೃದ್ಧಿಸಿಕೊಂಡರೆ ಸ್ವ ಉದ್ಯೋಗಕ್ಕೆ ದಾರಿಯಾಗುತ್ತದೆ ಎಂದರು.
ಶಿರಸಿಯ ನ್ಯೂ ಲುಕ್ ಬ್ಯೂಟಿ ಪಾರ್ಲರ್’ನ ಸೌಂದರ್ಯ ತಜ್ಞೆ ರೇಣುಕಾ ವಿದ್ಯಾರ್ಥಿನಿಯರಿಗೆ ಹಾಲು, ಟೊಮೆಟೊ, ಪಪ್ಪಾಯ ಹಣ್ಣು, ಸೌತೆಕಾಯಿ, ಕಾಫಿ ಪುಡಿ ಮೊದಲಾದ ಪ್ರಾಕೃತಿಕ ವಸ್ತುಗಳಿಂದ ಚರ್ಮದ ಸೌಂದರ್ಯ ವೃದ್ಧಿಸಿಕೊಳ್ಳುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕವಾಗಿ ತೋರಿಸಿಕೊಟ್ಟರು. ಜೊತೆಗೆ ವಿವಿಧ ಬಗೆಯ ಕೇಶ ಅಲಂಕಾರ, ಕ್ಷಣಾರ್ಧದಲ್ಲಿ ಸೀರೆ ಉಡುವ ಕೌಶಲ್ಯ, ಮದುಮಗಳನ್ನು ಅಲಂಕರಿಸುವ ವಿಧಾನಗಳನ್ನು ತೋರಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಡಾ. ಎಸ್ ಎಸ್ ಭಟ್, ಸಸ್ಯ ಶಾಸ್ತ್ರ ವಿಭಾಗ ಮುಖ್ಯಸ್ಥ ಕೆ ಎನ್ ರೆಡ್ಡಿ ಉಪಸ್ಥಿತರಿದ್ದರು. ಭೂಮಿಕಾ ಸಂಚಾಲಕಿ ಡಾಕ್ಟರ್ ಶೈಲಜಾ ಭಟ್ ಸ್ವಾಗತಿಸಿದರು. ಗ್ರಂಥ ಪಾಲಕಿ ಶಾರದಾ ಭಟ್ ವಂದಿಸಿದರು.