ಶಿರಸಿ: ರಾಜ್ಯ ಸರ್ಕಾರ ಹಾಲು ಉತ್ಪಾದಕರ ಮನವಿಗೆ ಸ್ಪಂದಿಸಿ ನಂದಿನಿಯ ಪ್ರತೀ ಲೀಟರ್ ಪ್ಯಾಕೆಟ್ ಹಾಲಿಗೆ 3 ರೂ. ಹೆಚ್ಚಳ ಮಾಡಿರುವ ಕಾರಣ ನಮ್ಮ ಧಾರವಾಡ ಹಾಲು ಒಕ್ಕೂಟವೂ ಸಹ ಹಾಲು ಉತ್ಪಾದಕರಿಗೆ ಪ್ರತೀ ಲೀಟರ್‌ಗೆ ನೀಡುತ್ತಿದ್ದ ದರದಲ್ಲಿ 3 ರೂ. ಹೆಚ್ಚಳ ಮಾಡಿದೆ. ಇದರಿಂದ ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಹೈನುಗಾರಿಕೆ ಮಾಡಲು ಹೆಚ್ಚಿನ ಉತ್ತೇಜನ ದೊರಕಿದಂತಾಗಿದೆ ಎಂದು ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಹೇಳಿದರು.
ಅವರು ಧಾರವಾಡ ಸಹಕಾರ ಹಾಲು ಒಕ್ಕೂಟದ ಶಿರಸಿಯ ಅಗಸೇಬಾಗಿಲಿನಲ್ಲಿರುವ ಕಚೇರಿಯಲ್ಲಿ ಶುಕ್ರವಾರ ವಿವಿಧ ಸಂಘಗಳ ಸದಸ್ಯರಿಗೆ ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು.
ಹಾಲು ಸಂಘಗಳ ಕಟ್ಟಡ ಹಾಗೂ ಮೂಲಭೂತ ಸೌಕರ್ಯದ ಅಭಿವೃದ್ಧಿಗಾಗಿ ಸರ್ಕಾರದಿಂದ ಅನುದಾನ ನೀಡಬೇಕು, ಹಾಲು ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯದರ್ಶಿಗಳಿಗೆ ಗೌರವಧನವನ್ನು ನೀಡಬೇಕೆಂಬ ಬೇಡಿಕೆಯನ್ನು ನಮ್ಮಿಂದ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ರಾಜ್ಯ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರಕುವ ವಿಶ್ವಾಸವಿದ್ದು, ಹಾಲು ಸಂಘಗಳಿಗೆ ಅನುದಾನ ದೊರಕಿದಲ್ಲಿ ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಹಾಲು ಸಂಘಗಳು ಹಾಗೂ ಕಾರ್ಯದರ್ಶಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಇದೇ ವೇಳೆ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ವತಿಯಿಂದ ಜಡ್ಡಿಗದ್ದೆ ಹಾಲು ಸಂಘದ ಸದಸ್ಯರಾದ ಗಣಪತಿ ಟಿ ಹೆಗಡೆ, ದಾಸನಕೊಪ್ಪ ಹಾಲು ಸಂಘದ ಜನಾರ್ಧನ ಈರಪ್ಪ ಸಾಕೆಣ್ಣನವರ ಇವರುಗಳಿಗೆ ತಲಾ ರೂ.45,000/-, ಹುತ್ಗಾರ ಹಾಲು ಸಂಘದ ಮಹಾದೇವ ಗೋವಿಂದ ಮೊಗೇರ ಇವರಿಗೆ ರೂ.30,000/-, ಕುಪ್ಪಗಡ್ಡೆ ಹಾಲು ಸಂಘದ ಸರೋಜಾ ಅಶೋಕ ಮಡಿವಾಳ ಕಾರಣ ರೂ.33,000/-, ಚಿಕ್ಕಬೆಂಗಳೆ ಹಾಲು ಸಂಘದ ಗೀತಾ ಪ್ರಶಾಂತ ನಾಯ್ಕ, ಸುರೇಶ ರುದ್ರಪ್ಪ ನಾಯ್ಕ ಇವರುಗಳಿಗೆ ರೂ.35,000/-, ರೂ.33,000/- ವಾನಳ್ಳಿ ಹಾಲು ಸಂಘದ ಅನಂತ ಕೃಷ್ಣ ಭಟ್ ಹಾಗೂ ರಾಮಕೃಷ್ಣ ನಾರಾಯಣ ಹೆಗಡೆ ಇವರುಗಳಿಗೆ ರೂ.32,000/-, ರೂ.40,000/- ಮೊತ್ತದ ಚೆಕ್‌ಗಳನ್ನು ಜಾನುವಾರು ವಿಮಾ ಯೋಜನೆಯ ಅಡಿಯಲ್ಲಿ ಹಾಗೂ ಧಾರವಾಡ ಸಹಕಾರ ಹಾಲು ಒಕ್ಕೂಟದ ನೌಕರರ ಕಲ್ಯಾಣ ಸಂಘದ ವತಿಯಿಂದ ಕಲ್ಯಾಣ ಸಂಘದ ಸದಸ್ಯರುಗಳಾಗಿದ್ದ ಹೀಪನಳ್ಳಿ ಹಾಲು ಸಂಘದ ವಿಶ್ವನಾಥ ಗಜಾನನ ಹೆಗಡೆ, ಭಾಶಿ ಹಾಲು ಸಂಘದ ಚಿತ್ರಶೇಖರ ಈರಪ್ಪ ಗೌಡ ಇವರುಗಳು ಅಪಘಾತದಿಂದ ಮರಣ ಹೊಂದಿದ ಕಾರಣ ಇವರುಗಳ ವಾರಸುದಾರರಿಗೆ ತಲಾ ರೂ.25,000/-, ಉಂಚಳ್ಳಿ ಹಾಲು ಸಂಘದ ಧರ್ಮಪ್ಪ ಜಟ್ಯಪ್ಪ ನಾಯ್ಕ, ನರೂರು ಹಾಲು ಸಂಘದ ಪಂಕಜಾ ನಾಗೇಂದ್ರ ನಾಯ್ಕ ಇವರು ಸ್ವಾಭಾವಿಕ ಮರಣ ಹೊಂದಿದ ಕಾರಣ ಸದರಿಯವರ ವಾರಸುದಾರರಿಗೆ ತಲಾ ರೂ.10,000/-, ಧೋರಣಗಿರಿ ಹಾಲು ಸಂಘದ ಪ್ರಕಾಶ ಗಣಪತಿ ಹೆಗಡೆ ಹಾಗೂ ಒಡ್ಡಿನಕೊಪ್ಪ ಹಾಲು ಸಂಘದ ಕೃಷ್ಣ ಕೊಡಿಯಾ ಇವರಿಗೆ ತಲಾ ರೂ.10,000/-, ತಾರಗೋಡ ಹಾಲು ಸಂಘದ ಗಣಪತಿ ವೆಂಕಟ್ರಮಣ ಹೆಗಡೆ, ಧೋರಣಗಿರಿ ಹಾಲು ಸಂಘದ ಮಹಾಲಕ್ಷ್ಮೀ ಮಂಜುನಾಥ ಭಟ್ ಹಾಗೂ ಅಜ್ಜೀಬಳ ಹಾಲು ಸಂಘದ ಶ್ರೀಹರ್ಷ ದೇವರು ಹೆಗಡೆ ಇವರು ಶಸ್ತ್ರ ಚಿಕಿತ್ಸೆಗೆ ಒಳಗಾದ ಕಾರಣ ತಲಾ ರೂ. ರೂ.5,000/-, ಮೊತ್ತದ ಚೆಕ್‌ಗಳನ್ನು ವಿತರಿಸಿದರು.
ಜಾನುವಾರು ಮರಣ ಹೊಂದಿದ ಕಾರಣ ಚೆಕ್ ಪಡೆದ ತಾವುಗಳು ಜಾನುವಾರು ವಿಮಾ ಯೋಜನೆಯಿಂದ ದೊರಕಿದ ಹಣದಲ್ಲಿ ಮತ್ತೊಂದು ಆಕಳನ್ನು ಖರೀದಿಸಿ. ತಾವುಗಳು ಹೈನುಗಾರಿಕೆಯಿಂದ ವಿಮುಖರಾಗದೇ ಇನ್ನೂ ಹೆಚ್ಚಿನ ಹಾಲಿನ ಉತ್ಪಾದನೆ ಮಾಡುವಂತಾಗಬೇಕು ಎಂದರು. ತಮ್ಮ ಎಲ್ಲಾ ಜಾನುವಾರುಗಳಿಗೆ ಕೂಡಲೇ ವಿಮೆಯನ್ನು ಮಾಡಿಸಬೇಕು, ಒಂದು ವರ್ಷದ ಹಿಂದೆ ಈಗಾಗಲೇ ವಿಮೆಯನ್ನು ಮಾಡಿಸಲಾದ ಜಾನುವಾರುಗಳಿಗೆ ನಮ್ಮ ಒಕ್ಕೂಟದ ಪಶುವೈದ್ಯರನ್ನು ಸಂಪರ್ಕಿಸಿ ಜಾನುವಾರು ವಿಮೆಯನ್ನು ನವೀಕರಣಗೊಳಿಸಿಕೊಳ್ಳಬೇಕು. ಒಕ್ಕೂಟದಿಂದ ಇನ್ನು ಕೆಲವೇ ದಿನಗಳಲ್ಲಿ ನೂತನವಾಗಿ ಜಾನುವಾರುಗಳಿಗೆ ವಿಮೆ ಮಾಡಿಸುವ ಕುರಿತು ಟೆಂಡರ್ ಕರೆಯಲಾಗಿದ್ದು ಮುಂದಿನ ದಿನಗಳಲ್ಲಿ ಒಕ್ಕೂಟದ ಸಹಯೋಗದೊಂದಿಗೆ ಹಾಲು ಉತ್ಪಾದಕರ ಜಾನುವಾರುಗಳಿಗೆ ವಿಮೆ ಮಾಡಿಸಿ ಕೊಡಲಾಗುವುದು ಎಂದರು. ಹಾಲು ಸಂಘಗಳಲ್ಲಿ ಹಾಲು ಪೂರೈಸುವ ಸದಸ್ಯರುಗಳು ತಮ್ಮ ವ್ಯಾಪ್ತಿಯ ಹಾಲು ಸಂಘಗಳಲ್ಲಿ ರೂ.200/- ಗಳನ್ನು ಪಾವತಿಸಿ ತಪ್ಪದೇ ಕಲ್ಯಾಣ ಸಂಘದ ಸದಸ್ಯರಾಗಿ ಹೆಚ್ಚಿನ ಹಾಲು ಉತ್ಪಾದನೆ ಮಾಡುವುದರ ಜೊತೆಗೆ ಕಲ್ಯಾಣ ಸಂಘದಿಂದ ಸಿಗುವ ಸೌಲಭ್ಯಗಳನ್ನು ಪಡೆಯುವಂತಾಗಬೇಕು ಎಂದು ಈ ಮೂಲಕ ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿಸ್ತರಣಾಧಿಕಾರಿ ಮೌನೇಶ ಎಂ ಸೋನಾರ, ಶಿರಸಿ ಉಪವಿಭಾಗದ ಗುರುದರ್ಶನ ಭಟ್, ವಿಸ್ತರಣಾ ಸಮಾಲೋಚಕ ಅಭಿಷೇಕ ನಾಯ್ಕ, ಜಯಂತ ಪಟಗಾರ ಹಾಗೂ ಜಾನುವಾರು ವಿಮಾ ಯೋಜನೆ ಮತ್ತು ಕಲ್ಯಾಣ ಸಂಘದ ಫಲಾನುಭವಿಗಳು ಹಾಗೂ ಹಾಲು ಉತ್ಪಾದಕರು ಉಪಸ್ಥಿತರಿದ್ದರು.