ಕಾರವಾರ: ಹಿರಿಯ ರಾಜಕಾರಣಿ, ಹಳಿಯಾಳ- ಜೊಯಿಡಾ- ದಾಂಡೇಲಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್.ವಿ.ದೇಶಪಾಂಡೆ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಆರ್.ವಿ.ದೇಶಪಾಂಡೆ ಅಭಿಮಾನಿಗಳ ಬಳಗ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಎಸ್.ಫಕೀರಪ್ಪ, ಕಳೆದ 10 ಚುನಾವಣೆಗಳಲ್ಲಿ 9 ವಿಧಾನಸಭಾ ಚುನಾವಣೆಯಲ್ಲಿ ಗೆದ್ದು, ಒಂದನ್ನು ಸೋತಿದ್ದಾರೆ. ಹಳಿಯಾಳ ಕ್ಷೇತ್ರಕ್ಕೆ ಮುಂಡಗೋಡ ಭಾಗ ಸೇರಿದಾಗ ಹೆಚ್ಚು ಗೆದ್ದಿರುವ ಅವರನ್ನ ನಾವು ಹತ್ತಿರದಿಂದ ನೋಡಿದ್ದೇವೆ. ಅವರ ಹಿರಿತನ, ಅಭಿವೃದ್ಧಿಪರ ಕಾಳಜಿ ಕಂಡು ಅವರಿಗೆ ಮಂತ್ರಿಗಿರಿ ನೀಡಬೇಕಿತ್ತು. ಕಾರಣಾಂತರದಿoದ ಕೊಟ್ಟಿರಲಿಲ್ಲ. ಆದರೆ ಈಗ ಕೊಡಬೇಕು ಒತ್ತಾಯಿಸಿದ್ದಾರೆ.
ಜಿಲ್ಲೆಯ ರಾಜಕೀಯ ಮುತ್ಸದ್ಧಿ ಆರ್.ವಿ.ದೇಶಪಾಂಡೆಯವರಿಗೆ ಮುಖ್ಯಮಂತ್ರಿ ಸಿದ್ದರಾಮ್ಯಯನವರ ಮಂತ್ರಿಮ0ಡಲದಲ್ಲಿ ಸಚಿವ ಸ್ಥಾನ ಕೊಡದೆ ಅವರ ಹಿರಿತನಕ್ಕೆ ಮತ್ತು ಅವರ ಅನುಭವಕ್ಕೆ ಹಾಗೂ ಜಾತ್ಯಾತೀತ ವ್ಯಕ್ತಿತ್ವಕ್ಕೆ ಯಾವುದೇ ಮನ್ನಣಿ ನೀಡದೆ ಇರುವುದು ವಿಷಾದಕರ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ದೇಶಪಾಂಡೆಯವರು ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲದೆ ಉತ್ತಮ ಕೆಲಸ ಮಾಡುತ್ತಾ ಬಂದವರು. ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕು ದಶಕಗಳ ಕಾಲ ಹಲವಾರು ಹುದ್ದೆಯಲ್ಲಿ ಕೆಲಸ ಮಾಡುತ್ತಾ ಜಿಲ್ಲೆಯ ಸರ್ವಾಂಗಿಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಜಿಲ್ಲೆಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟವನ್ನು ನಿರ್ಮಾಣ ಮಾಡುವುದರ ಮೂಲಕ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲಾ ಜಾತಿ, ವರ್ಗದವರನ್ನು ಪ್ರೀತಿ ವಿಶ್ವಾಸದಿಂದ ಒಟ್ಟಿಗೆ ತೆಗೆದುಕೊಂಡು ಹೋಗುವ ಶಕ್ತಿ ದೇಶಪಾಂಡೆಯವರಿಗೆ ಇದೆ. ಆದ್ದರಿಂದ ಕಾಂಗ್ರೆಸ್ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಸಿದ್ದಾರಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ದೇಶಪಾಂಡೆಯವರಿಗೆ ಕೂಡಲೇ ಸಚಿವ ಸ್ಥಾನ ಕೊಡಬೇಕೆಂದು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಅಶೋಕ ಗಾಣಿಗೇರ, ಹುಲಗಪ್ಪ ಭೋವಿವಡ್ಡರ್, ರಾಜು ಕೊರವರ್, ಸಂತೋಷ್ ಕಟ್ಟಿಮನಿ, ಮಂಜುನಾಥ ಕಲಾಲ್ ಇದ್ದರು.