ಶಿರಸಿ: ಲಯನ್ಸ್ ಕ್ಲಬ್ ಶಿರಸಿ, ಲಯನ್ಸ್ ಎಜುಕೇಶನ್ ಸೊಸೈಟಿ (ರಿ) ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಆ.1, ಮಂಗಳವಾರ ಲಯನ್ಸ್ ಸಭಾಭವನದಲ್ಲಿ, 2023-24ರ ಸಾಲಿನ ವಿದ್ಯಾರ್ಥಿ ಪ್ರತಿನಿಧಿಗಳ ಪ್ರಮಾಣ ವಚನ ಸ್ವೀಕಾರ, ಪ್ರತಿಭಾ ಪುರಸ್ಕಾರ ಶಿರಸಿ ಲಯನ್ಸ್ ಅಕಾಡೆಮಿ ಮತ್ತು ಲಯನ್ಸ್ ಕ್ವೆಸ್ಟ್ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕ ಭೀಮಣ್ಣ ನಾಯ್ಕ್ ಉಪಸ್ಥಿತರಿದ್ದರು. ಈ ವೇಳೆ ನೂತನ ಶಾಸಕ ಭೀಮಣ್ಣ ನಾಯ್ಕರಿಗೆ ಗೌರವ ಸಮರ್ಪಣೆ ನೀಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಭೀಮಣ್ಣ, ಶಿಕ್ಷಣ ಕ್ಷೇತ್ರಕ್ಕೆ ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯು ಅತ್ಯುತ್ತಮ ಕೊಡುಗೆ ನೀಡುತ್ತಿದೆ. ನಮ್ಮ ಜಿಲ್ಲೆಯ ಪ್ರತಿಭಾನ್ವಿತರಿಗೆ ಶಿರಸಿಯಲ್ಲೆ ಸ್ಪರ್ಧಾತ್ಮಕ ಶಿಕ್ಷಣ ನೀಡಲು ಆರಂಭವಾದ ಶಿರಸಿ ಲಯನ್ಸ ಅಕಾಡೆಮಿಗೆ ಶುಭಕೋರಿದರು. ನರ್ಸರಿಯಿಂದ ಪಿ.ಯು.ವರೆಗೆ ಸಮಗ್ರ ಗುಣಾತ್ಮಕ ಶಿಕ್ಷಣ ಸೇವಾನಿರತ ಲಯನ್ಸ ಸಂಸ್ಥೆಯ ಬೆಳವಣಿಗೆಗೆ ಸಾರ್ವಜನಿಕರು ಜೊತೆ ನಿಲ್ಲಬೇಕು. ಶಿರಸಿ ಕ್ಷೇತ್ರವನ್ನು ಮಾದರಿಯಾಗಿಸುವ ನನ್ನ ಕನಸಿಗೂ ಎಲ್ಲರೂ ಕರಜೋಡಿಸಬೇಕು ಎಂದು ಕರೆನೀಡಿದರು. ಪಂಚಾಯತ್‌ನಿಂದ ಹಿಡಿದು ಪಾರ್ಲಿಮೆಂಟ್‌ವರೆಗೆ ಪ್ರಾಮಾಣಿಕ, ಬದ್ದತೆಯಿಂದ ಕಾರ್ಯನಿರ್ವಹಿಸುವ ಯುವ ಜನಾಂಗ ದೇಶದ ಭದ್ರತೆ, ಪ್ರಗತಿ ಕಾಪಾಡಲು ಅತ್ಯಗತ್ಯ. ವಿದ್ಯಾರ್ಥಿಗಳು ಶೇ 100ಕ್ಕೆ 100 ಪ್ರಯತ್ನ ಹಾಗೂ ಗುರಿ ಸಾಧಿಸುವ ಬಯಕೆ ಹೊಂದಿದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ, ಎಂದು ವಿದ್ಯಾರ್ಥಿಗಳಿಗೆ ಹಿತನುಡಿದರು.
ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ MJF ಲ.ಪ್ರೊ.ರವಿನಾಯಕ್ ಪ್ರಾಸ್ತಾವಿಕ ಮಾತನಾಡಿದರು. ಸಿರಸಿ ಲಯನ್ಸ್ ಎಜ್ಯುಕೇಶನ್ ಸೊಸೈಟ್(ರಿ) ಉಪಾಧ್ಯಕ್ಷ ಲಯನ್ ಪ್ರಭಾಕರ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್, ಶಿರಸಿ ಅಧ್ಯಕ್ಷ MJF ಲಯನ್ ಅಶೋಕ ಹೆಗಡೆ ಲಯನ್ಸ ಕ್ವೆಸ್ಟ್ ಕುರಿತು ಪರಿಚಯಾತ್ಮಕವಾಗಿ ಮಾತನಾಡಿದರು. ಲಯನ್ಸ್ ಕ್ಲಬ್ ಶಿರಸಿ ಕಾರ್ಯದರ್ಶಿ ಲಯನ್ ಜ್ಯೋತಿ ಅಶ್ವಥ ಹೆಗಡೆ, ಸಹ ಕಾರ್ಯದರ್ಶಿ ಲಯನ್ ವಿನಯ್ ಹೆಗಡೆ ಬಸವನಕಟ್ಟೆ, ಲಯನ್ ಶ್ಯಾಮಸುಂದರ ಭಟ್, MJF ಲಯನ್ ಶ್ರೀಕಾಂತ್ ಹೆಗಡೆ ಹಾಗೂ ಲಯನ್ಸ್ ಕ್ಲಬ್ ಶಿರಸಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹದಿಹರೆಯದ ಸಮಸ್ಯೆಗಳ ಪರಿಹಾರದ ಬಗ್ಗೆ ಇರುವ ವಿಶೇಷ, ವಿಶಿಷ್ಟ, ರೀತಿಯ ಶಿಕ್ಷಣ ನೀಡುವ ಕ್ವೆಸ್ಟ್ ತರಗತಿಗಳನ್ನು ಉದ್ಘಾಟಿಸಲಾಯಿತು. 2023-24ರ ಸಾಲಿನ ವಿದ್ಯಾರ್ಥಿ ಪ್ರತಿನಿಧಿಗಳ ಅಧ್ಯಕ್ಯ ಕು.ಕೌಶಿಕ್ ನಾಯ್ಕ, ಉಪಾಧ್ಯಕ್ಷ ವಿಭವ್ ಭಾಗ್ವತ್ ಜೊತೆಗೂಡಿ ಇತರ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಶಾಸಕರು ಪ್ರಮಾಣ ವಚನ ಬೋಧಿಸಿದರು. 2022-23ರ ಸಾಲಿನ ಎಸೆಸೆಲ್ಸಿಯಲ್ಲಿ 625 ಅಂಕಗಳಿಗೆ 621 ಅಂಕಗಳಿಸಿ ರಾಜ್ಯಕ್ಕೆ 5ನೇ ಸ್ಥಾನ ಪಡೆದ ಲಯನ್ಸ್ ಶಾಲೆಯ ವಿದ್ಯಾರ್ಥಿನಿ ಕುಮಾರಿ ರವೀನಾ ಪನ್ವಾರ್, 2022-23ರ ಸಾಲಿನಲ್ಲಿ, ಸ್ವ ಪ್ರಯತ್ನದಿಂದ ಭುವನೇಶ್ವರ ಐಐಟಿಗೆ ಆಯ್ಕೆಯಾದ ಶಾಲೆಯ ಹಳೆಯ ವಿದ್ಯಾರ್ಥಿ ಸ್ವಸ್ತಿಕ್ ಹೆಗಡೆ, ರೂಟ್ಸ್ ಟು ರೂಟ್ಸ್ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ 10ನೇ ತರಗತಿಯ ವಿದ್ಯಾರ್ಥಿ ಕುಮಾರ ಪೃಥ್ವಿ ಶೆಟ್ಟಿ, ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಲಯನ್ಸ್ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿ ಕುಮಾರ ಶಿವಪ್ರಸಾದ ಭಟ್ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ, ಶ್ರೀಮತಿ ದೀಪಾ ಶಶಾಂಕ ಹೆಗಡೆ ಮಾರ್ಗದರ್ಶನದಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಗೀತೆಯನ್ನು ಹಾಡಿದರು. ಲಯನ್ಸ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಶಶಾಂಕ್ ಹೆಗಡೆ ಸ್ವಾಗತಿಸಿದರು. ಸಹಕಾರ್ಯದರ್ಶಿ ಲಯನ್ ವಿನಯ್ ಹೆಗಡೆ ಬಸವನ ಕಟ್ಟೆ ವಂದನಾರ್ಪಣೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಾಲೆಯ ಸಹ ಶಿಕ್ಷಕಿಯರಾದ ಶ್ರೀಮತಿ ಮುಕ್ತಾ ನಾಯ್ಕ್, ಶ್ರೀಮತಿ ಅನಿತಾ ಭಟ್ ನಿರೂಪಿಸಿದರು. ವಿದ್ಯಾರ್ಥಿ ಸಂಸತ್ತಿನ ಮುಖ್ಯ ಕಾರ್ಯನಿರ್ವಾಹಕರಾದ ರೇಷ್ಮಾ ಮಿರಾಂದ, ಮತ್ತು ಶ್ರೀಮತಿ ಗೀತಾ ನಾಯ್ಕ್ (ಸಹಶಿಕ್ಷಕಿಯರು) ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ನಿರ್ವಹಿಸಿದರು. ವಿದ್ಯಾರ್ಥಿ ವೃಂದ ಶಾಲಾ ಶಿಕ್ಷಕ-ಶಿಕ್ಷಕೇತರ ಬಳಗ, ಪಾಲಕ ಪೋಷಕರು ಕಾರ್ಯಕ್ರಮದಲ್ಲಿ ಭಾಗಿಯಾದರು.