• Slide
  Slide
  Slide
  previous arrow
  next arrow
 • ಕಣ್ಣು ಬೇನೆ: ಭಯ ಬೇಡ ಎಚ್ಚರಿಕೆ ಇರಲಿ

  300x250 AD

  ಆರೋಗ್ಯ ಮಾಹಿತಿ: ಪಿಂಕ್ ಐ ಅಥವಾ ಕಂಜಕ್ಟಿವೈಟಿಸ್ (Conjunctivitis) ಒಂದು ಸರ್ವೇ ಸಾಮಾನ್ಯವಾಗಿ ಎಲ್ಲ ವಯಸ್ಕರಲ್ಲಿಯೂ ಕಂಡುಬರುವಂತಹ ಅಲ್ಪ ಪ್ರಮಾಣದ ಕಣ್ಣಿನ ಸೋಂಕು. ಇದನ್ನು ಮದ್ರಾಸ್ ಐ ಎಂದು ಕೂಡ ಹೇಳುತ್ತಾರೆ.
  ಈ ಕಾಯಿಲೆಯಿಂದ ನಮ್ಮ ಕಣ್ಣಿನ ಬಿಳಿಗುಡ್ಡೆಯ ಹೊರಪದರು ಸೋಂಕಿನಿಂದ ಉರಿಯೂತವಾಗಿ (Inflamed) ಕೆಂಪಗಾಗುತ್ತದೆ ಹಾಗೂ ಕಣ್ಣಲ್ಲಿ ನೀರು ಬರುವುದು, ಪಿಚ್ಚು/ಮಡ್ಡು ಬರುವಿಕೆ ಹಾಗು ಕಣ್ಣು ಕೊರೆತ, ತುರಿಕೆ, ರೆಪ್ಪೆಯ ಬಾವು ಮುಂತಾದ ಹಲವಾರು ಲಕ್ಷಣಗಳನ್ನು ಕಾಣಬಹುದು.
  ಈ ಸೋಂಕು ಸರ್ವಕಾಲಿಕವಾಗಿ ಎಲ್ಲ ವಯಸ್ಕರಲ್ಲಿಯೂ ಉಂಟಾಗಬಹುದು ಹಾಗೂ ಸೋಂಕಿನಿಂದ ಸಾಮಾನ್ಯವಾಗಿ ಯಾವುದೇ ಗಂಭೀರ ಸಮಸ್ಯೆಗಳಾಗುವುದಿಲ್ಲ. ಆದರೆ ಕೆಲವು ಬಾರಿ ಹಠಾತ್ತಾಗಿ ಸಾಂಕ್ರಾಮಿಕಗೊಂಡು ಹಲವಾರು ಜನರಲ್ಲಿ ಹರಡಬಹುದು. ಸಮಯೋಚಿತ ಚಿಕಿತ್ಸೆಯಿಂದ ಹಾಗೂ ಸೂಕ್ತ ಮುನ್ನಚ್ಚರಿಕೆ ಕ್ರಮಗಳನ್ನು ಪಾಲಿಸುವುದರಿಂದ ಈ ಸೋಂಕನ್ನು ಗುಣಪಡಿಸಬಹುದು ಹಾಗೂ ಹರಡುವಿಕೆಯನ್ನು ತಡೆಗಟ್ಟಬಹುದು.

  ಕಾರಣಗಳು:
  ಈ ಸೋಂಕು ಬರಲು ಹಲವಾರು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾಗಿ
  ಕೆಲ ಸಾಂಕ್ರಾಮಿಕ ವೈರಸ್ ಗಳು, ಹಾಗೂ ಅಪರೂಪಕ್ಕೆ ಬ್ಯಾಕ್ಟೀರಿಯಾಗಳು (Infectious conjunctivitis) ಹಾಗೂ ಧೂಳು ಮತ್ತು ಕೆಲ ಪೋಲನ್ ನಂತಹ ವಸ್ತುಗಳ ಅಲರ್ಜಿಯಿಂದ(Allergic conjunctivitis) ಮತ್ತು ಕೆಲ ರಾಸಾಯನಿಕಗಳಿಂದ ಈ ಪಿಂಕ್ ಐ ಅಥವಾ ಕಂಜಕ್ಟಿವೈಟಿಸ್ ಉಂಟಾಗಬಹುದು.

  ಸೋಂಕಿನ ಲಕ್ಷಣಗಳು:

  ಸೋಂಕಿತ ವ್ಯಕ್ತಿ ಅಥವಾ ಅವನು ಉಪಯೋಗಿಸಿದ ವಸ್ತುಗಳ ಜೊತೆ ಅಥವಾ ಧೂಳಿಗೆ ಸಂಪರ್ಕವಾದ ಕೆಲವೇ ಗಂಟೆಗಳಲ್ಲಿ ಅಥವಾ ಕೆಲ ದಿನಗಳಲ್ಲಿ ಕಣ್ಣು ಕೆಂಪಾಗುವುದು, ಕಣ್ಣು ಉರಿತ, ಕಣ್ಣಿನಲ್ಲಿ ನೀರು ಬರುವಿಕೆ, ಪಿಚ್ಚು ಬರುವುದು, ಕಣ್ಣಿನ ರೆಪ್ಪೆಯ ಊತ, ತುರಿಕೆ ಹಾಗೂ ಕೆಲ ಸಂದರ್ಭದಲ್ಲಿ ಕಪ್ಪುಗುಡ್ಡೆಯ ಮೇಲೆ ಸೋಂಕು ಹರಡಿದಾಗ ನೋವು ಕಾಣಿಸಿಕೊಳ್ಳಬಹುದು ಹಾಗೂ ದೃಷ್ಟಿ ಮುಂಜಾಗಬಹುದು.

  ಚಿಕಿತ್ಸಾ ವಿಧಾನಗಳು :
  ಈ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಅಲಕ್ಷ್ಯ ಮಾಡದೆ ಹಾಗೂ ಮೌಢ್ಯ ಪದ್ಧತಿಗಳನ್ನು ಅನುಸರಿಸದೇ ತಕ್ಷಣವೇ ಹತ್ತಿರದ ನೇತ್ರತಜ್ಞರನ್ನು ಸಂಪರ್ಕಿಸಬೇಕು.

  300x250 AD

  ಮುನ್ನೆಚ್ಚರಿಕೆ ಕ್ರಮಗಳು :
  ಈ ಸೋಂಕಿನ ಸಾಂಕ್ರಾಮಿಕ ಸ್ವರೂಪ ತೀವ್ರವಾದದ್ದರಿಂದ ಇದರ ಹರಡುವಿಕೆಯನ್ನು ತಡೆಗಟ್ಟಲು ಕೆಲ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

  1. ಸೋಂಕಿತ ವ್ಯಕ್ತಿಯ ಜೊತೆ ಕನಿಷ್ಠವಾದ ಸಂಪರ್ಕವನ್ನು ಪಾಲಿಸಬೇಕು ಹಾಗು ಸೋಂಕಿತ ವ್ಯಕ್ತಿ ಉಪಯೋಗಿಸಿದ ಕರವಸ್ತ್ರ, ಟವಲ್, ಹಾಸಿಗೆ ಇತ್ಯಾದಿ ವಸ್ತುಗಳನ್ನು ಕೆಲಸ ಸಮಯ ಹಂಚಿಕೊಳ್ಳಬಾರದು.
  2. ಪದೇ ಪದೇ ನಮ್ಮ ಕೈಗಳನ್ನು ಸೋಪಿನಿಂದ ತೊಳೆದುಕೊಳ್ಳಬೇಕು ಮತ್ತು ಅನವಶ್ಯಕವಾಗಿ ನಮ್ಮ ಮುಖವನ್ನು ಅಥವಾ ಕಣ್ಣುಗಳನ್ನು ಪದೇ ಪದೇ ಮುಟ್ಟಿಕೊಳ್ಳಬಾರದು. ಔಷಧಿಗಳನ್ನು ಯಾವಕಾರಣಕ್ಕೂ ಮತ್ತೊಬ್ಬರು ಹಂಚಿಕೊಳ್ಳಬಾರದು.
  3. ಸೋಂಕಿನ ಲಕ್ಷಣ ಇದ್ದವರು ಸಾರ್ವಜನಿಕ ಸಾರಿಗೆ ಮತ್ತು ಸಭೆ ಸಮಾರಂಭಗಳಿಂದ ದೂರವಿರುವುದು ಸೂಕ್ತ.
  4. ವಾಹನ ಚಲಾಯಿಸುವಾಗ ಸೂಕ್ತ ಕನ್ನಡಕವನ್ನು ಹಾಗೂ ಹೆಲ್ಮೆಟ್ ಧರಿಸಿಬೇಕು
  5. ಆದಷ್ಟು ಧೂಳಿನಿಂದ ದೂರವಿರಬೇಕು ಅಥವಾ ಸೂಕ್ತ ಸಂರಕ್ಷಣಾ ಕ್ರಮಗಳನ್ನು ಅನುಸರಿಸಬೇಕು
  6. ಕಾಂಟಾಕ್ಟ್ ಲೆನ್ಸ್ ಬಳಸುವವರು ಕಡ್ಡಾಯವಾಗಿ ಸೂಕ್ತ ಆರೋಗ್ಯಕರ ಪದ್ಧತಿಗಳನ್ನು ಪಾಲಿಸಬೇಕು ಮತ್ತು ಅವರಿಗೆ ಈ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಕಡ್ಡಾಯವಾಗಿ ಕಾಂಟಾಕ್ಟ್ ಲೆನ್ಸ್ ಬಳಕೆಯನ್ನು ತಕ್ಷಣವೇ ನಿಲ್ಲಿಸಬೇಕು ಹಾಗೂ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು. ಸೋಂಕಿನ ಲಕ್ಷಣವಿದ್ದವರು ಆ ಸಮಯದಲ್ಲಿ ಶಾಲೆ/ ಕಚೇರಿಗಳಿಗೆ ಹೋಗಬಾರದು.
  7. ಶಾಲೆ, ಕಾಲೇಜು, ಕಚೇರಿಗಳಲ್ಲಿ ಈ ಸಂದರ್ಭದಲ್ಲಿ ಕೈಕುಲುಕುವುದು, ಪೆನ್ನು ಪಟ್ಟಿ ಇತ್ಯಾದಿ ವಸ್ತುಗಳನ್ನು ವಿನಿಮಯ ಮಾಡಿಕೊಳ್ಳುವುದು ಮೊದಲಾದ ನೇರ ಸಂಪರ್ಕಗಳನ್ನು ಆದಷ್ಟು ತಪ್ಪಿಸಬೇಕು.
  8. ಸೋಂಕು ಇದ್ದವರು ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಬೇಕು ಹಾಗೂ ಇತ್ತೀಚೆಗೆ ಶಸ್ತ್ರ ಚಿಕಿತ್ಸೆ ಆಗಿದ್ದರೆ ಖಡ್ಡಾಯವಾಗಿ ವೈದ್ಯರಲ್ಲಿ ತಪಾಸಣೆಗೆ ಒಳಗಾಗಬೇಕು.

  ಈ ಸೋಂಕಿಗೆ ಸಂಬಂಧಿಸಿದ ಸಾಮಾನ್ಯ ತಪ್ಪು ತಿಳುವಳಿಕೆಗಳು:

  1. ಪಿಂಕ್ ಐ ಕಣ್ಣು ಬೇನೆಯ ಸೋಂಕಿತ ವ್ಯಕ್ತಿಯ ಕಣ್ಣುಗಳನ್ನು ವೀಕ್ಷಿಸಿದರೆ ಸೋಂಕು ಹರಡುವುದಿಲ್ಲ. ಕೇವಲ ನೇರ ಸಂಪರ್ಕದಿಂದ ಮಾತ್ರ.
  2. ಕೆಲ ಅವೈಜ್ಞಾನಿಕ ಔಷಧಿಗಳನ್ನು ಸೋಂಕಿತ ಕಣ್ಣಿಗೆ ಹಾಕುವದು ಇತ್ಯಾದಿ ಪದ್ಧತಿಗಳನ್ನು ಅನುಸರಿಸಬಾರದು. ಅದರಿಂದಲೇ ಫಂಗಸ್ ಮೊದಲಾದ ಸೊಂಕು ಆಗಬಹುದು.
  3. ಸೋಂಕು ಬರುವ ಮೊದಲೇ ತಡೆಗಟ್ಟಲು ಯಾವುದೇ ಔಷಧಿ ಇರುವುದಿಲ್ಲ.

  ಈ ಸೋಂಕನ್ನು ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆಯ ಮುಖಾಂತರ ಗುಣಪಡಿಸಬಹುದು ಹಾಗೂ ಕಟ್ಟುನಿಟ್ಟಾದ ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿದರೆ ಇದರ ಹರಡುವಿಕೆಯನ್ನು ಕೂಡ ತಡೆಗಟ್ಟಬಹುದು.
  ಕೆಲವೊಮ್ಮೆ ಇದೇ ಲಕ್ಷಣಗಳು ಕಣ್ಣು ಬೇನೆ ಮಾತ್ರವಲ್ಲದೇ ಕಣ್ಣಿನ ಒತ್ತಡ ಹೆಚ್ಚಾದಾಗ, ಯಾವುದೇ ಕಸ ಅಥವಾ foreign body ಬಿದ್ದಾಗ, ಕಪ್ಪುಗುಡ್ಡೆಯ ಹುಣ್ಣು, ತಾರಕೆ ಸುತ್ತಿನ ಉರಿತ (uviitis) ಮುಂತಾದ ದೃಷ್ಟಿಗೆ ಮಾರಕವಾಗುವಂತಹ ಗಂಭೀರ ಖಾಯಿಲೆಗಳಿಂದಲೂ ಬರಬಹುದು. ಹಾಗಾಗಿ ತಜ್ಞ ವೈದ್ಯರ ಸೂಕ್ತ ಪರೀಕ್ಷೆ ಮತ್ತು ಸಲಹೆ ಇಲ್ಲದೇ ಸ್ವಯಂ ಚಿಕಿತ್ಸೆ ಅಪಾ ಆಗಬಹುದು.
  ಇಂತಹದೇ ಒಂದು ಕಣ್ಣಿನ ಸೋಂಕು ಇತ್ತೀಚಿನ ದಿನಗಳಲ್ಲಿ ಹಲವಾರು ಭಾಗಗಳಲ್ಲಿ ಹಲವಾರು ಜನರಿಗೆ ಹರಡುತ್ತಿದೆ. ಇದರ ಬಗ್ಗೆ ಸಾರ್ವಜನಿಕರು ಭಯಪಡದೆ ಮೇಲೆ ತಿಳಿಸಿದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ ಸೂಕ್ತ ತಜ್ಞ ವೈದ್ಯರನ್ನು ಸಂಪರ್ಕಿಸಿದರೆ ಈ ಸೋಂಕನ್ನು ನಿವಾರಿಸಬಹುದು ಮತ್ತು ಹರಡುವಿಕೆಯನ್ನು ತಡೆಗಟ್ಟಬಹುದು.

  ಡಾ.ವಿಶ್ವನಾಥ್ ಅಂಕದ್
  ಹಿರಿಯ ನೇತ್ರ ತಜ್ಞರು
  ಗಣೇಶ ನೇತ್ರಾಲಯ
  ಶಿರಸಿ, ಸಾಗರ, ಭಟ್ಕಳ

  Share This
  300x250 AD
  300x250 AD
  300x250 AD
  Leaderboard Ad
  Back to top