ಶಿರಸಿ: ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಪ್ರೌಢಶಾಲಾ ಹಂತವನ್ನು ಮುಗಿಸಿ- ಕಾಲೇಜಿಗೆ ಬಂದ ತಕ್ಷಣ , ತಾವು ಸರ್ವ
ಸ್ವತಂತ್ರರು ಎನ್ನುವ ಭಾವನೆಯಲ್ಲಿ , ಮೋಜು-ಮಸ್ತಿನ ದಾರಿಯಲ್ಲಿ ಸಾಗದೇ, ಅಧ್ಯಯನಶೀಲ ದಾರಿಯಲ್ಲಿ ಸಾಗಿ ಗುರಿ
ಮುಟ್ಟಬೇಕೆಂದು ಕಿರಣ ಭಟ್ ಬೈರುಂಬೆ ಕರೆ ನೀಡಿದರು.
ಎಮ್.ಇ.ಎಸ್. ಆರ್.ಎನ್.ಶೆಟ್ಟಿ ಪಾಲೆಟೆಕ್ನಿಕ್‌ನಲ್ಲಿ ಪ್ರಥಮ ವರುಷದ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಏರ್ಪಡಿಸಿದ್ದ ಇಂಡಕ್ಷನ್ ಕಾರ್ಯಕ್ರಮದಡಿ ಮಾತನಾಡುತ್ತ, ಹೇಗೂ ನಾವು ಕಾಲೇಜಿನ ಯುವಕರು ಎಂದು, ಕಲಿಯುವಿಕೆಯನ್ನು ನಿರ್ಲಕ್ಷ್ಯ ಮಾಡಿದಲ್ಲಿ ಭವಿಷ್ಯದಲ್ಲಿ ಯಾವ ರೀತಿಯ ನೋವನ್ನು ಅನುಭವಿಸಬೇಕಾಗುತ್ತದೆ ಎಂಬುದಕ್ಕೆ, ಸ್ವತಃ ತಮ್ಮ ಉದಾಹರಣೆಯನ್ನೇ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ಕಿರಣ ಭಟ್ ಡಿಪ್ಲೋಮಾ ಓದುವಾಗ ಅಂತಿಮ ವರುಷದಲ್ಲಿ ಒಂದು ವಿಷಯದ ಪರೀಕ್ಷೆಗೆ ಆಕಸ್ಮಿಕವಾಗಿ ಗೈರು
ಹಾಜರಾಗಿ , ಹಿಂದುಳಿಯುವಂತಹ ಪ್ರಸಂಗ ಬಂದಿತ್ತು. ಇದರಿಂದಾಗಿ ಅವರು ಯಾವ ರೀತಿ ಯಾತನೆ ಪಡಬೇಕಾಯಿತು, ಎಂಬುದನ್ನು ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ತಿಳಿಸಿದರು.
ಕಿರಣ ಭಟ್ ತಮ್ಮ ಯಾತನೆಯಿಂದ ಹೊರ ಬಂದು , ಅಧ್ಯಯನವನ್ನು ಮುಂದುವರಿಸಿ ಬಿ. ಇ. ಮೆಕ್ಯಾನಿಕಲ್ ಇಂಜನಿಯರಿಂಗ್, ಎಮ್.ಟೆಕ್. ಇನ್ ಥರ್ಮೊಡೈನಾಮಿಕ್ಸ್, ಎಂ. ಎ. ಇನ್ ಜರ್ನಲಿಸ್ಟ್ & ಮಾಸ್ ಕಮ್ಯುನಿಕೇಶನ್ ಗಳಲ್ಲಿ ಪದವಿ ಪಡೆದಿದ್ದಾರೆ. ಗುರಿ ತಲುಪಲೇಬೇಕೆಂಬ ಛಲವಿದ್ದವರಿಗೆ ಮಾತ್ರ
ಇವೆಲ್ಲಾ ಸಾಧ್ಯ. ಹೀಗೆ ಬಹುಮುಖ ಪ್ರತಿಭೆಯುಳ್ಳ ಕಿರಣ ಭಟ್ ತಮ್ಮ ವೃತ್ತಿ ಜೀವನವನ್ನು ಪತ್ರಕರ್ತನಾಗಿ ಜನಶ್ರೀ
ಚಾನಲ್ ನಲ್ಲಿ ವೃತ್ತಿ ಆರಂಭಿಸಿ, ಸುವರ್ಣ ನ್ಯೂಸ್, ರಾಜ್ ನ್ಯೂಸ್ , ಲೈಪ್ 360 ಪತ್ರಿಕೆ ಗಳಲ್ಲಿ ಅನುಭವ
ಹೊಂದಿರುವುದಲ್ಲದೇ, ಕಾಂಪ್ಲೆಕ್ಸ್ ಪ್ರಶಸ್ತಿ ವಿಜೇತ ಮಸಯ್ಯಾ ಚಿತ್ರಕ್ಕೆ ಸಾಹಿತ್ಯ ಬರವಣಿಗೆಕಾರರಾಗಿಯೂ, ಮತ್ತು ಪ್ರಸ್ತುತ
ಕರ್ನಾಟಕ ರಾಜ್ಯ ಅಧಿಕೃತ ವಿದ್ಯುತ್ ಗುತ್ತಿಗೆದಾರರ ಸಂಘದ ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹಲವಾರು ಕೆಲಸಗಳ ನಡುವೆಯೂ , ತಾನು ಕಲಿತ ಸಂಸ್ಥೆಯ ಮೇಲಿರುವ ಅಭಿಮಾನದಿಂದ , ಹೊಸದಾಗಿ ಪ್ರವೇಶ
ಪಡೆದಿರುವ ವಿದ್ಯಾರ್ಥಿಗಳೊಂದಿಗೆ ತಮ್ಮ ವೃತ್ತಿ ಜೀವನದ ಅನುಭವಗಳನ್ನು ಮುಕ್ತವಾಗಿ ಹಂಚಿಕೊಂಡು, ತಮ್ಮ ಪಾಲಕರು-
ಗುರುವೃಂದಗಳಿಗೆ ಮೋಸ ಮಾಡದೇ ಯಶಸ್ಸನ್ನು ಸಾಧಿಸಬೇಕೆಂದು ಕರೆ ನೀಡಿದರು.
ಪ್ರಾಚಾರ್ಯರಾದ ಎಮ್. ಆರ್ ಶೆಟ್ಟಿ ಸಂಪನ್ಮೂಲ ವ್ಯಕ್ತಿಗಳಾದ ಕಿರಣ ಭಟ್’ರನ್ನು ಹೂ-ಗುಚ್ಛ ನೀಡಿ ಸ್ವಾಗತಿಸಿದರು. ಮೆಕ್ಯಾನಿಕಲ್ ವಿಭಾಗದ ಉಪನ್ಯಾಸಕರಾದ ಎಸ್.ಟಿ. ಹೆಗಡೆ , ಕಿರಣ ಭಟ್ಟರವರನ್ನು ಪರಿಚಯಿಸುತ್ತಾ, ಇವರು ನಮ್ಮ ಸಂಸ್ಥೆಯ ಹೆಮ್ಮೆಯ ಗುರು ಮೀರಿಸಿದ ಶಿಷ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ಇಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥರಾದ ಜೆ. ಟಿ.
ನಾಯ್ಕ ಸಂಪನ್ಮೂಲ ವ್ಯಕ್ತಿಗಳಿಗೆ ಕಿರು-ನೆನಪಿನ ಕಾಣಿಕೆ ನೀಡಿದರು. ಉಪನ್ಯಾಸಕ ಸಂಜಯ ಕೂರ್ಸೆ
ಕಾರ್ಯಕ್ರಮವನ್ನು ನಿರ್ವಹಿಸುತ್ತಾ, ಕಿರಣ ಭಟ್ಟರಂತೆ ನಮ್ಮೆಲ್ಲಾ ಪ್ರಸ್ತುತ ವಿದ್ಯಾರ್ಥಿಗಳು ಸಾಧನೆ ಮಾಡಬೇಕೆಂದು ಕರೆ ನೀಡಿ,
ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಿದರು.