ಶಿರಸಿ: ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ಗುಡ್ಡಗಾಡು ಜಿಲ್ಲೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಸಂಪರ್ಕಕ್ಕೆ ಭೌಗೋಳಿಕ ಸರ್ವೇ ಜರುಗಿಸಿ ಕಾಲುಸಂಕದ ಮೂಲಕ ಗ್ರಾಮೀಣ ಭಾಗದ ಸಂಪರ್ಕಕ್ಕೆ ಪ್ರಾತಿನಿಧ್ಯ ನೀಡಬೇಕೆಂದು ಕಾಂಗ್ರೇಸ್ ಧುರೀಣ ಮತ್ತು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಪಂಚಾಯತ್ ರಾಜ್ ಮಂತ್ರಿ ಪ್ರಿಯಾಂಕ ಖರ್ಗೆ ಅವರಿಗೆ ಕೋರಿದ್ದಾರೆ.
ಅವರು ಬೆಂಗಳೂರಿನಲ್ಲಿ ಪಂಚಾಯತ್ ರಾಜ್ ಮಂತ್ರಿ ಪ್ರಿಯಾಂಕ ಖರ್ಗೆ ಅವರನ್ನು ಗೃಹ ಕಚೇರಿಯಲ್ಲಿ ಭೇಟ್ಟಿಯಾಗಿ ಮನವಿ ನೀಡಿದರು.
ಕಾಲುಸಂಕ ಕೊರತೆಯಿಂದ ಗ್ರಾಮೀಣ ಭಾಗದ ಗುಡ್ಡಗಾಡು ಜನರು ಹಾಗೂ ವಿದ್ಯಾರ್ಥಿಗಳು ದಿನನಿತ್ಯ ಸಂಚಾರದ ಸಮಸ್ಯೆಗಳನ್ನು ಎದುರಿಸುತ್ತಿರುವರು. ಮಳೆಗಾಲದಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರಿಂದಲೇ ರಚಿಸಿಕೊಂಡ ತಾತ್ಕಾಲಿಕ ಕಾಲುಸಂಕದ ಮೇಲಿನ ಓಡಾಟ ಅಪಾಯದಿಂದ ಕೂಡಿದ್ದು,ಗುಡ್ಡಗಾಡು ಜನರು ಸಂಪರ್ಕದ ಕೊರತೆಯಿಂದ ಮೂಲಭೂತ ಸೌಕರ್ಯದಿಂದ ವಂಚಿತರಾಗುತ್ತಿರುವುದರಿ0ದ ಜಿಲ್ಲೆಯ ಭೌಗೋಳಿಕ ಸರ್ವೇ ಮೂಲಕ ಕಾಲುಸಂಕದ ಅವಶ್ಯಕತೆ ದೃಢೀಕರಿಸಿ, ಸರಕಾರವು ಮೂಲಭೂತ ಹೆಚ್ಚುವರಿ ಕಾಲುಸಂಕಕ್ಕೆ ಮಂಜೂರಿಗೆ ಆದೇಶಿಸಿ, ಗುಡ್ಡಗಾಡು ಜಿಲ್ಲೆಯಾದ ಉತ್ತರ ಕನ್ನಡಕ್ಕೆ ವಿಶೇಷ ಕೊಡುಗೆ ನೀಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಇತ್ತೀಚಿನ ಎರಡು ವರ್ಷಗಳಿಂದ ವಿವಿಧ ಪತ್ರಿಕೆಗಳ ಮೂಲಕ ಸಂಪರ್ಕದ ಕೊರತೆಯಿಂದ ಉಂಟಾದ ಅನಾನುಕೂಲತೆ ಮತ್ತು ಕಾಲುಸಂಕದ ಅವ್ಯವಸ್ಥೆಯ ಚಿತ್ರದೊಂದಿಗೆ ಪ್ರಕಟಗೊಂಡ ಪತ್ರಿಕೆಗಳ ತುಟುಕುಗಳನ್ನು ಸಚಿವರ ಗಮನಕ್ಕೆ ತಂದಿರುವುದು ವಿಶೇಷವಾಗಿತ್ತು.
500 ಕಾಲುಸಂಕ ಬೇಡಿಕೆ: ಜಿಲ್ಲಾದ್ಯಂತ ಅಪಾರ ಪ್ರಮಾಣದಲ್ಲಿ ಕಾಲುಸಂಕದ ಅವಶ್ಯಕತೆ ಇದ್ದು, ಆದ್ಯತೆ ಮೇರೆಗೆ 500 ಕಾಲುಸಂಕ ಪಂಚಾಯತ್ ರಾಜ್ ಇಲಾಖೆಯಿಂದ ಅನುದಾನ ಘೋಷಿಸಬೇಕೆಂದು ರವೀಂದ್ರ ನಾಯ್ಕ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.