ಕಾರವಾರ: ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತಿಯಲ್ಲಿ ಹಣಕಾಸಿನ ಅವ್ಯವಹಾರವಾಗಿದೆ. ಈ ಅಕ್ರಮ, ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಭಾರತೀಯ ಕಿಸಾನ್ ಜಿಲ್ಲಾ ಸಂಘದ ಅಧ್ಯಕ್ಷ ಶಿವರಾಮ ಗಾಂವ್ಕರ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೂವರೆ ವರ್ಷದ ಹಿಂದೆ ಜೆಜೆಎಂ ಯೋಜನೆಯಡಿ 14 ಲಕ್ಷ ವೆಚ್ಚದಲ್ಲಿ ಹುಲಿದೇವರ ಬೇಣ ಗ್ರಾಮಕ್ಕೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೆ ಬಿಲ್ ಬುಕ್, ಕ್ಯಾಶ್ ಬುಕ್‌ಗಳಲ್ಲಿ ಗ್ರಾಮದ ಪೈಪ್‌ಲೈನ್ ದುರಸ್ತಿಗೆ ಹಣ ಬಳಕೆ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಜೆಜೆಎಂ ಯೋಜನೆಯಲ್ಲಿ ಅನುಷ್ಠಾನಗೊಂಡರೆ ಗುತ್ತಿಗೆದಾರರು ನಿರ್ವಹಣೆ ಮಾಡಬೇಕು ಎಂದು ಸರಕಾರದ ಆದೇಶವಿದೆ. ಆದರೆ ಈ ಯೋಜನೆಯ ಪೈಪ್‌ಲೈನ್ ದುರಸ್ತಿ ಮಾಡಲಾಗಿದೆ ಎಂದು ಬಿಲ್ ಪಾವತಿಯಾಗಿದ್ದು, ಗ್ರಾಮ ಪಂಚಾಯತಿಯಿ0ದ ಏಕೆ ದುರಸ್ತಿ ಮಾಡಲಾಗಿದೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ ಎಂದರು.
ಮೇ 2023ರಲ್ಲಿ ಪಂಚಾಯತಿಗೆ ಪತ್ರ ಬರೆದು ಕಾಮಗಾರಿ ನಡೆದ ಸ್ಥಳ ತೋರಿಸುವ ಬಗ್ಗೆ ಕೋರಿದರೂ ಇದುವರೆಗೂ ಎಲ್ಲಿ ಕಾಮಗಾರಿಯಾಗದೆ ಎಂದು ತೋರಿಸಿಲ್ಲ. ಜೆಜೆಎಂ ಯೋಜನೆ ಅನುಷ್ಠಾನವಾದ ಬಗ್ಗೆ ಪಮಚಾಯತಿಗೆ ಮಾಹಿತಿಯೂ ಇಲ್ಲ ಎನ್ನುತ್ತಿದ್ದಾರೆ. ಈ ಯೋಜನೆ ಅನುಷ್ಠಾನ ಮಾಡಿದವರು ಪಂಚಾಯತಿಗೆ ಹಸ್ತಾಂತರ ಮಾಡಲಾಗಿದೆ ಎನ್ನುತ್ತಿದ್ದಾರೆ. ಇದನ್ನು ಗಮನಿಸಿದರೆ ಪಂಚಾಯತಿಯಿ0ದ ಅವ್ಯವಹಾರ ಆಗಿರುವುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ ರಾಜ್ ಅಧಿನಿಯಮದ ಪ್ರಕಾರ ಪಂಚಾಯತಿ ಸದಸ್ಯರು ಹಾಗೂ ಅವರ ಹತ್ತಿರದ ಸಂಬOಧಿಗಳು ಕಾಮಗಾರಿಯನ್ನು ಪಡೆಯಲು ಅವಕಾಶವಿಲ್ಲ. ಆದರೆ ಮೂರು ಜನರು ಕಾಮಗಾರಿಯನ್ನು ಮಾಡಿ ಬಿಲ್ ಪಾವತಿಸಿಕೊಂಡಿದ್ದಾರೆ. ಈ ಬಗ್ಗೆ ಜಿಪಂ ಸಿಇಒ ಅವರ ಗಮನಕ್ಕೆ ತಂದರೂ ಇದುವರೆಗೂ ತನಿಖೆ ನಡೆಸಿದ ಬಗ್ಗೆ ಯಾವುದೇ ದಾಖಲೆ ನೀಡಿಲ್ಲ ಎಂದು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜನಾರ್ಧನ ಹೆಗಡೆ, ರಾಮಕೃಷ್ಣ ಹರಿಮನೆ, ಮಂಜುನಾಥ ಭಟ್ಟ, ರಾಮಚಂದ್ರ ಹೆಬ್ಬಾರ, ಗಣೇಶ ಗಾಂವ್ಕರ ಮುಂತಾದವರು ಇದ್ದರು.