ಕುಮಟಾ : ಟ್ಯಾಂಕರ್ ಒಂದರಿಂದ ಅನಿಲ ಸೋರಿಕೆಯಾಗಿ ಭಯ ಹುಟ್ಟಿಸಿದ ಘಟನೆ ತಾಲೂಕಿನ ಕಡೇಕೋಡಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ. ಗೋವಾ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಟ್ಯಾಂಕರ್ ಹಿಂಭಾಗದ ಪೈಪ್‌ಗಳ ಮೂಲಕ ಬಿಳಿ ಬಣ್ಣದ ದ್ರವವು ಸೋರಿ ತಕ್ಷಣ ಸುತ್ತಲೂ ಮೋಡಗಳಂತೆ ಆವರಿಸಿದ್ದು, ಕೆಲವರು ಗಾಬರಿಯಾಗಿ ಮನೆಗಳಿಂದ ಹೊರಗೆ ಓಡಿ ಬಂದು ಕಂಗಾಲಾಗಿ ನಿಂತರೆ, ಸಂಚರಿಸುವ ವಾಹನಗಳು ಅಲ್ಲಲ್ಲೇ ನಿಂತು ಹಿಂತಿರುಗಿ ದೂರ ಸರಿಯತೊಡಗಿದ್ದವು. ನಂತರ ಘಟನೆ ಬಗ್ಗೆ ಟ್ಯಾಂಕರ್ ಚಾಲಕನನ್ನು ಜನರು ವಿಚಾರಿಸಿದ್ದು, ಇದು ಲಿಕ್ವಿಡ್ ನೈಟ್ರೋಜನ್ ದ್ರವವಾಗಿದ್ದು ಅಪಾಯವಿಲ್ಲ. ಸ್ವಲ್ಪ ಸಮಸ್ಯೆಯಾಗಿದ್ದು, ತಂತ್ರಜ್ಞರಿಗೆ ಕರೆ ಮಾಡಿದ್ದೇನೆ. ಬಂದು ಸರಿಪಡಿಸುತ್ತಾರೆ, ಇದರಿಂದ ಜನರಿಗೆ ಏನೂ ಸಮಸ್ಯೆ ಇಲ್ಲ. ಯಾರೂ ಹೆದರಬೇಕಾಗಿಲ್ಲ ಎಂದು ತಿಳಿಸಿದ ನಂತರ ಸಾರ್ವಜನಿಕರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.
ಟ್ಯಾಂಕರ್’ನಿಂದ ಅನಿಲ ಸೋರಿಕೆ: ಕೆಲಕಾಲ ಆತಂಕದ ವಾತಾವರಣ
