ಶಿರಸಿ: ದಿವಂಗತ ಶ್ರೀಪಾದ ಹೆಗಡೆ ಕಡವೆಯವರ ಸಹಕಾರಿ ಚಳುವಳಿ, ಸಾಮಾಜಿಕ ಕಳಕಳಿಯ ಆಶಯಗಳನ್ನು ತೋಟಗಾರರ ಮನೆ ಮನೆಗೆ ತಲುಪಿಸುವ ಅಪರೂಪದ ಕಾರ್ಯವನ್ನು ಕಡವೆಯವರ ಅಭಿಮಾನಿಗಳ ನೇತೃತ್ವದಲ್ಲಿ ಆರಂಭಿಸಲಾಗಿದೆ ಎಂದು ಟಿಎಸ್ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಹೇಳಿದರು.
ರವಿವಾರ ಇಲ್ಲಿಯ ಟಿಎಸ್ಎಸ್ ಸಭಾಂಗಣದಲ್ಲಿ ದಿ. ಶ್ರೀಪಾದ ಹೆಗಡೆ ಕಡವೆ ಇವರ ಜನ್ಮಶತಾಬ್ದಿ 2024 ವರ್ಷಾಚರಣೆ ಅಂಗವಾಗಿ ತೋಟಗಾರರ ಸ್ವಯಂ-ಸಹಕಾರಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಡವೆ ಹೆಗಡೆಯವರ ಅಭಿಮಾನಿಗಳು ಮತ್ತು ಹಿತೈಷಿಗಳ ಒತ್ತಾಸೆಯಂತೆ ಸ್ವಯಂ-ಸಹಕಾರಿ ಅಭಿಯಾನದ ರೂಪದಲ್ಲಿ ನೂರಾರು ಕಾರ್ಯಕರ್ತರ ಮೂಲಕ ತೋಟಗಾರರ ಪ್ರತಿ ಮನೆಯನ್ನು ಮುಂಬರುವ ದಿನದಲ್ಲಿ ತಲುಪಲಿದ್ದೇವೆ. ಈ ಕಾರ್ಯಕ್ಕೆ ಎಲ್ಲ ಸಹಕಾರಿ ಬಂಧುಗಳು, ಜನರು ಸಹಕಾರ ನೀಡಬೇಕೆಂದರು.
ಹಿರಿಯ ಸಹಕಾರಿಗಳಾದ ಭಾಸ್ಕರ ಹೆಗಡೆ ಕಾಗೇರಿ ಮಾತನಾಡಿ, ಕಡವೆ ಹೆಗಡೆಯವರ ದೂರದೃಷ್ಟಿ ಮೆಚ್ಚುವಂತದ್ದು. ಜಾಗತಿಕ ಮಟ್ಟದಲ್ಲಿ ಸುಸ್ಥಿರ ಸಮಾಜ ನಿರ್ಮಿಸಲು ಸಹಕಾರ ಕ್ಷೇತ್ರದಿಂದ ಮಾತ್ರ ಸಾಧ್ಯ. ಇಂದು ಸಹಕಾರ ಕ್ಷೇತ್ರದತ್ತ ಯುವ ಸಮುದಾಯವನ್ನು ಸೆಳೆಯುವ ಕಾರ್ಯ ನಡೆದಿಲ್ಲ. ಈ ನಿಟ್ಟಿನಲ್ಲಿ ಸಹಕಾರ ಕ್ಷೇತ್ರದ ಹಿರಿಯ ನಾಯಕರುಗಳು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಸಂಕಷ್ಟದಲ್ಲಿ ಸುಲಭವಾಗುವ ಸಂಘಟನೆ ಸಮೃದ್ಧದಲ್ಲಿ ಕಷ್ಟವಾಗುತ್ತದೆ. ಆದ್ದರಿಂದಲೆ ಸಹಕಾರ ಕ್ಷೇತ್ರದ ಮೌಲ್ಯಗಳು ಜನಮಾನಸದಲ್ಲಿ ದೂರಾಗುತ್ತಿವೆ. ಆ ದಿಶೆಯಲ್ಲಿ ಕಡವೆ ಹೆಗಡೆಯವರ ಆಶಯಗಳೊಂದಿಗೆ ಸಹಕಾರ ಕ್ಷೇತ್ರದ ಸಕರಾತ್ಮಕ ಭಾವನೆ ಸಮುದಾಯದಲ್ಲಿ ಮೂಡುವಂತಾಗಲಿ ಎಂದರು.
ಸಾಮಾಜಿಕ ಕಾರ್ಯಕರ್ತ ಎಸ್.ಕೆ. ಭಾಗವತ್ ಪ್ರಾಸ್ತಾವಿಕ ಮಾತನ್ನಾಡಿ, ಕಡವೆ ಹೆಗಡೆಯವರ ಚಿಂತನೆಗಳನ್ನು ಯುವ ಪೀಳಿಗೆಯತ್ತ ತಲುಪಿಸುವ ಅಪರೂಪದ ಅಭಿಯಾನ ಇದಾಗಬೇಕು. ಸಹಕಾರಿ ಸಂಘಗಳ ಪಾವಿತ್ರ್ಯತೆಯು ಪ್ರಸ್ತುತ ದಿನಗಳಲ್ಲಿ ಮರೆಯಾಗುತ್ತಿರುವುದು ಖೇದಕರ ಸಂಗತಿಯಾಗಿದೆ. ಯಾವುದೇ ಪಕ್ಷ ಬೇಧವಿಲ್ಲದೆ ಆರಂಭಗೊಂಡಿರುವ ತೋಟಗಾರರ ಸ್ವಯಂ ಸಹಕಾರಿ ಅಭಿಯಾನಕ್ಕೆ ಸಹಕಾರಿಗಳು ಸ್ವಯಂ ಪ್ರೇರಿತರಾಗಿ ಭಾಗವಹಿಸಿ ಸಹಕಾರಿ ಕ್ಷೇತ್ರವನ್ನು ಬಲಪಡಿಸುವಂತೆ ಕರೆ ನೀಡಿದರು. ರಮೇಶ ಹೆಗಡೆ ಹಳೆಕಾನಗೋಡು ಅಭಿಯಾನದ ರೂಪು-ರೇಷೆಗಳ ಕುರಿತಾಗಿ ಸಮಗ್ರ ಮಾಹಿತಿ ನೀಡಿದರು. ಇದೇ ವೇಳೆ ಕಡವೆ ಹೆಗಡೆಯವರ ಆಶಯಗಳ ಕುರಿತ ಮಾಹಿತಿ ಕರಪತ್ರ ಬಿಡುಗಡೆಗೊಳಿಸಲಾಯಿತು.
ವೇದಿಕೆಯಲ್ಲಿ ಹಿರಿಯ ಸಹಕಾರಿಗಳಾದ ಜಿ.ಆರ್. ಹೆಗಡೆ ಸೋಂದಾ, ಟಿಎಸ್ಎಸ್ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಉಪಸ್ಥಿತರಿದ್ದರು. ಶ್ರೀಪಾದ ಹೆಗಡೆ ಕಡವೆ ಸ್ವಾಗತಿಸಿದರು. ಟಿಎಸ್ಎಸ್ ನಿರ್ದೇಶಕ ಗಣಪತಿ ರಾಯ್ಸದ್ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ಆರಂಭದಲ್ಲಿ ವಿನಾಯಕ ಭಟ್ಟ ಗೋಳಿಕೊಪ್ಪ ವೇದಘೋಷ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಅನೇಕ ಕಡೆಗಳಿಂದ ಕಡವೆ ಹೆಗಡೆಯವರ ಅಭಿಮಾನಿಗಳು, ಹಿತೈಷಿಗಳು ಉಪಸ್ಥಿತರಿದ್ದರು.