ಕಾರವಾರ: ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಬಹುತೇಕ ಕಡೆಗಳಲ್ಲಿ ಸೇತುವೆಗಳು ಮುಳುಗಡೆ ಆಗಿದ್ದರೆ, ಹಲವೆಡೆ ಕುಸಿದು ಹೋಗಿವೆ. ಜೋಯಿಡಾದ ಕಾತೇಲಿ ಗ್ರಾಮದಲ್ಲಿ ಸೇತುವೆ ಕುಸಿದಿದ್ದು, ವೇಗವಾಗಿ ಹರಿಯುತ್ತಿದ್ದ ನದಿಯಲ್ಲಿ ರೋಗಿಯೊಬ್ಬರನ್ನು ಸ್ಥಳಾಂತರ ಮಾಡಲು ಹರಸಾಹಸ ಪಟ್ಟಿದ್ದಾರೆ. ಮೊದಮೊದಲು ವಾಹನದಲ್ಲಿ ಸ್ಥಳಾಂತರಿಸಲು ಮುಂದಾದರೂ ಆದರೆ ಸೇತುವೆ ಕುಸಿದ ಕಾರಣಕ್ಕೆ ರೋಗಿಯನ್ನು ಗ್ರಾಮಸ್ಥರೇ ಹೊತ್ತು ಆಸ್ಪತ್ರೆಗೆ ಸಾಗಿಸಿದ್ದಾರೆ.
ಜಿಲ್ಲಾ ಪಂಚಾಯತ್‌ನಿಂದ 45 ಲಕ್ಷ ರೂ. ವೆಚ್ಚದಲ್ಲಿ ಕಾವೇರಿ ನದಿಗೆ ತಾತ್ಕಾಲಿಕವಾಗಿ ಸೇತುವೆ ನಿರ್ಮಾಣ ಮಾಡಲಾಗಿತ್ತು. ಆದರೆ ಭಾರಿ ಮಳೆಗೆ ಸೇತುವೆ ಕುಸಿದಿದೆ. ಇದರಿಂದಾಗಿ ಕಾತೇಲಿ, ಕೆಲೋಲಿ ಗ್ರಾಮಗಳ ನಡುವಿನ ಸಂಪರ್ಕವಾಗಿದ್ದ ಕೊಂಡಿ ಕಳಚಿದಂತಾಗಿದೆ. ಭಾರೀ ಮಳೆಯಿಂದ ಕಾವೇರಿ ನದಿ ಉಕ್ಕಿ ಹರಿದು ಸೇತುವೆಗೆ ಹಾನಿಯಾಗಿದೆ. ಅಪಾಯಕಾರಿಯಾಗಿ ಮುರಿದು ಬಿದ್ದಿರುವ ಸೇತುವೆಯನ್ನೇ ಈಗಲೂ ಇಲ್ಲಿನ ಜನ ಬಳಸುತ್ತಿದ್ದಾರೆ. ಮಳೆ ಹೆಚ್ಚಾದಲ್ಲಿ ಪೂರ್ತಿ ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇದೆ.