Slide
Slide
Slide
previous arrow
next arrow

ಗೋಕರ್ಣ ಪೂಜೆ ಶ್ರೀಮಠಕ್ಕೆ ಶಂಕರರು ನೀಡಿದ ಹೊಣೆ: ರಾಘವೇಶ್ವರ ಶ್ರೀ

300x250 AD

ಗೋಕರ್ಣ: ಶ್ರೀಸಂಸ್ಥಾನ ಮಹಾಬಲ ಸನ್ನಿಧಿಗೆ ಪೂಜಾಕೈಂಕರ್ಯ ಸಾಂಗವಾಗಿ ನೆರವೇರಿಸಿಕೊಂಡು ಬರುವಂತೆ ಆದಿಗುರು ಶಂಕಕರು ಮೂಲ ಮಠ ಸ್ಥಾಪನೆ ವೇಳೆಯೇ ಆದೇಶ ನೀಡಿದ್ದರು ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

ಅಶೋಕೆಯ ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಬುಧವಾರ ಗೋಕರ್ಣದ ಉಪಾಧಿವಂತ ಮಂಡಳಿಯ ಭಿಕ್ಷಾಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಮೂರು ಬಾರಿ ಶ್ರೀಕ್ಷೇತ್ರ ಗೋಕರ್ಣಕ್ಕೆ ಭೇಟಿ ನೀಡಿದ್ದ ಶಂಕರಾಚಾರ್ಯರು ಅಶೋಕೆಯಲ್ಲಿ ಆದ್ಯ ರಘೂತ್ತಮ ಮಠ ಸ್ಥಾಪನೆ ವೇಳೆ ಎರಡು ಜವಾಬ್ದಾರಿಗಳನ್ನು ಶಿಷ್ಯಪರಂಪರೆಗೆ ವಹಿಸಿದ್ದರು. ಶ್ರೀಸಂಸ್ಥಾನ ಮಹಾಬಲೇಶ್ವರನ ಪೂಜೆ ಒಂದಾದರೆ, ಗೋಕರ್ಣ ಮಂಡಲಾಚಾರ್ಯರ ಜವಾಬ್ದಾರಿ ಇನ್ನೊಂದು ಎಂದು ಸ್ಪಷ್ಟಪಡಿಸಿದರು.

ಶಂಕರಾಚಾರ್ಯರು ಸ್ಥಾಪನೆ ಮಾಡಿದ ಸಂದರ್ಭದಲ್ಲಿ ಶ್ರೀಮಠದ ಹೆಸರು ಆದ್ಯ ಶ್ರೀ ರಘೂತ್ತಮ ಮಠ ಎಂದಾಗಿತ್ತು. 12ನೇ ಪೀಠಾಧಿಪತಿಗಳ ಅವಧಿಯಲ್ಲಿ ಅದು ಸ್ಥಳಾಂತರಗೊಂಡಿತು. ಆಗ ಪೀಠಾಧಿಪತಿಗಳಾಗಿದ್ದವರು ರಾಮಚಂದ್ರ ಭಾರತೀ ಸ್ವಾಮೀಜಿಗಳು. ಆದ್ದರಿಂದ ಅವರು ಹೊಸನಗರ ಬಳಿ ಸ್ಥಾಪನೆ ಮಾಡಿದ ಮಠಕ್ಕೆ ಶ್ರೀರಾಮಚಂದ್ರಾಪುರ ಮಠ ಎಂದೇ ಹೆಸರು ಬಂತು ಎಂದು ಇತಿಹಾಸವನ್ನು ಉಲ್ಲೇಖಿಸಿದರು. ಶ್ರೀಮಠಕ್ಕೆ ಮತ್ತು ಶ್ರೀ ಮಹಾಬಲನಿಗೆ ಮಾತ್ರ ಶ್ರೀಸಂಸ್ಥಾನ ಎಂಬ ಪೂರ್ವನಾಮ ಸೇರಿಕೊಳ್ಳುತ್ತದೆ. ಆದ್ದರಿಂದ ಗೋಕರ್ಣ ದೇವಾಲಯ ಹಾಗೂ ಶ್ರೀಮಠದ ಸಂಬಂಧ ಪರಂಪರಾಗತವಾದದ್ದು ಎಂದು ಸಮರ್ಥಿಸಿದರು.
ಶ್ರೀಮಠಕ್ಕೂ ಉಪಾಧಿವಂತ ಮಂಡಳಿಗೂ ಅವಿನಾಭಾವ ಸಂಬಂಧ ಇದೆ ಎಂದು ಬಣ್ಣಿಸಿದ ಶ್ರೀಗಳು, ಘೋರ ತಪಸ್ಸು ಮಾಡಿದ ರಾವಣನಿಗೆ ಆತ್ಮಲಿಂಗ ಒಲಿದರೂ ಒಂದು ಹೊತ್ತು ಪೂಜೆ ಮಾಡುವ ಭಾಗ್ಯ ಒದಗಿ ಬರಲಿಲ್ಲ; ಆದರೆ ತಲೆ ತಲಾಂತರಗಳಿಂದ ಉಪಾಧಿವಂತ ಮಂಡಳಿ ಆ ಅವಕಾಶ ಪಡೆಯುತ್ತಾ ಬಂದಿರುವುದು ಪೂರ್ವಜನ್ಮದ ಪುಣ್ಯದ ಫಲ ಎಂದು ಬಣ್ಣಿಸಿದರು.

300x250 AD

ಉಪಾಧಿವಂತರ ಮತ್ತು ಅವರ ಹಕ್ಕುಗಳ ರಕ್ಷಣೆ ಹೊಣೆ ಶ್ರೀಮಠದ್ದು, ಗೋಕರ್ಣದ ವಿದ್ವಾಂಸರ, ಉಪಾಧಿವಂತರ ಮಕ್ಕಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡೇ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಮೂಲಮಠ ಆವರಣದಲ್ಲೇ ಆರಂಭಿಸಿದ್ದು, ಇಲ್ಲಿ ಕಲಿತ ಮಕ್ಕಳು ಇಡೀ ದೇಶ ಬೆಳಗುವಂತಾಗಬೇಕು ಎನ್ನುವುದೇ ಆಶಯ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಯಜ್ಞಪತಿ ಭಟ್ಟರು, ಸೀತಾರಾಮ ಶಂಕರಲಿಂಗ, ಷಡಕ್ಷರಿ ಕೃಷ್ಣ ಭಟ್ಟರು, ರಾಮಾ ಜೋಯಿಸರು, ಗಣು ಭಟ್ಟ (ಮರಣೋತ್ತರ) ಅವರಿಗೆ ಸಾಧನ ಸನ್ಮಾನ ನೀಡಿ ಗೌರವಿಸಲಾಯಿತು.
ಚಾತುರ್ಮಾಸ ಸಮಿತಿ ಅಧ್ಯಕ್ಷ ಯು.ಎಸ್.ಗಣಪತಿ ಭಟ್, ಹವ್ಯಕ ಮಹಾಮಂಡಲ ಗೌರವ ಕಾರ್ಯದರ್ಶಿ ನಾಗರಾಜ ಭಟ್ ಪಿದಮಲೆ, ಶ್ರೀಮಠದ ಪ್ರಶಾಶನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧಿಕಾರಿ ಜಿ.ಎಲ್.ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top