ನವದೆಹಲಿ: ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಯಾರಿ ನಡೆಸುತ್ತಿರುವ ನಡುವೆಯೇ ಬಿಜೆಪಿ ಆಡಳಿತದಲ್ಲಿರುವ ಉತ್ತರಾಖಂಡ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಸಂಹಿತೆಗೆ ಸಂಬಂಧಿಸಿ ಕರಡು ಪ್ರತಿ ಸಿದ್ದವಾಗಿದೆ. ವರ್ಷದ ಹಿಂದೆಯೇ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ರಚಿಸಿದ್ದ ತಜ್ಞರ ಸಮಿತಿಯು ಈಗಾಗಲೇ ಏಕರೂಪ ನೀತಿ ಸಂಹಿತೆ ಜಾರಿಗೆ ಸಂಬಂಧಿಸಿದ ವರದಿಯನ್ನು ಸಿದ್ದಪಡಿಸಿದೆ.
ಸದ್ಯದಲ್ಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಲಿದೆ. ಈ ವರದಿಯೇ ಕೇಂದ್ರ ಸರ್ಕಾರಕ್ಕೂ ಮಾದರಿಯಾಗುವ ನಿರೀಕ್ಷೆಯಿದೆ. ಸದ್ಯ ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿದ ನಂತರ ವರದಿ ಕುರಿತು ವಿವರ ನೀಡಿದರು.
ಎರಡು ವರ್ಷದ ಹಿಂದೆ ಉತ್ತರಾಖಂಡದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದ ನಂತರ ಏಕರೂಪ ನಾಗರೀಕ ಸಂಹಿತೆ ಜಾರಿಗೊಳಿಸುವ ಕುರಿತು ನೀಡಿದ್ದ ಭರವಸೆಯಂತೆ ಸಮಿತಿ ರಚಿಸಿದ್ದೆವು. ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಸಮಿತಿಯು ಕರಡನ್ನು ಸಿದ್ದಪಡಿಸಿದೆ. ಸದ್ಯವೇ ಸರ್ಕಾರಕ್ಕೆ ಸಲ್ಲಿಸುವ ನಿರೀಕ್ಷೆಯಿದ್ದು, ಬಳಿಕ ಸದನದಲ್ಲಿ ಮಂಡಿಸಲಾಗುವುದು ಎಂದಿದ್ದಾರೆ.