ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ, ಅರಣ್ಯ ಭೂಮಿ ಸಾಗುವಳಿ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಮಂಜೂರಿ ಪ್ರಕ್ರಿಯೆಗೆ ಸಂಬ0ಧಿಸಿ ಉಂಟಾದ ಕಾನೂನಾತ್ಮಕ ಗೊಂದಲಕ್ಕೆ ಅರಣ್ಯವಾಸಿ ಹೋರಾಟಗಾರರಿಂದ ತೀವ್ರ ಆಕ್ಷೇಪ ಹಾಗೂ ಆಕ್ರೋಶ ವ್ಯಕ್ತವಾಗಿದ್ದು, ಹಾಗೂ ಕಾನೂನಿಗೆ ವ್ಯತಿರಿಕ್ತವಾಗಿ ತಿರಸ್ಕಾರವಾದ ಅರ್ಜಿಗಳ ಕುರಿತು ಚರ್ಚೆ ಹಾಗೂ ಮಂಜೂರಿ ಪ್ರಕ್ರಿಯೆಯಲ್ಲಿ ತಿರಸ್ಕಾರವಾದ ಅರಣ್ಯವಾಸಿಗಳ ಅರ್ಜಿಗಳಿಗೆ ಮೇಲ್ಮನವಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಸಾಗರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮೇಲ್ಕಂಡ ಕಾರ್ಯಕ್ರಮ ಜರುಗಿದವು.
ಕಾನೂನಿಗೆ ವ್ಯತಿರಿಕ್ತವಾಗಿ ಅರ್ಜಿ ತಿರಸ್ಕಾರ, ಅರಣ್ಯ ಅಧಿಕಾರಿಗಳ ದೌರ್ಜನ್ಯ, ಮೂರು ತಲೆಮಾರಿನ ದಾಖಲೆಗಳ ಆಕ್ಷೇಪ ವ್ಯಕ್ತಪಡಿಸಿ ಹೋರಾಟಗಾರರಿಂದ ಪ್ರಶ್ನಾವಳಿ ಪ್ರಸ್ತಾಪಿಸಿ ಕಾನೂನು ಬಾಹಿರ ಕೃತ್ಯದ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸಭೆಯಲ್ಲಿ ಬಿಸಿ ಬಿಸಿ ಚರ್ಚೆಯಾಗಿರುವುದು ವಿಶೇಷವಾಗಿತ್ತು. ಅಲ್ಲದೇ, ತಿರಸ್ಕಾರವಾಗಿರುವ ಆದೇಶವನ್ನ ಪುನರ್ ಪರಿಶಿಲಿಸಬೇಕೆಂದು ಹೋರಾಟಗಾರರು ಅಗ್ರಹಿಸಿದರು. ಉಪವಿಭಾಗ ಸಮಿತಿಯ ಕಾರ್ಯದರ್ಶಿ ಚಂದ್ರಶೇಖರ್, ಎಸಿಎಫ್ ಶ್ರೀಧರ, ಸಿಪಿಐ ಸೀತಾರಾಮ ಉಪಸ್ಥಿತಿಯಲ್ಲಿ ತಾಲೂಕ ದಂಡಾಧಿಕಾರಿಗಳು ಮಲ್ಲೇಶ್ ಪೂಜಾರಿ ಅಧ್ಯಕ್ಷತೆಯಲ್ಲಿ ಚರ್ಚೆ ಜರುಗಿದವು.
ಹತ್ತು ದಿನ ಕಾಲಾವಕಾಶ:
ಹೋರಾಟಗಾರರ ಪ್ರಸ್ತಾಪಿಸಿದ ಅರಣ್ಯ ಹಕ್ಕು ಕಾಯಿದೆಯಲ್ಲಿನ ಅರ್ಜಿ ತಿರಸ್ಕಾರದ ಆಕ್ಷೇಪಕ್ಕೆ ಹತ್ತು ದಿನದಲ್ಲಿ ನೀಡಲಾಗುವುದೆಂದು ಸಭೆಯ ಅಧ್ಯಕ್ಷತೆಯನ್ನ ವಹಿಸಿದ ತಾಲೂಕ ದಂಡಾಧಿಕಾರಿ ಮಲ್ಲೇಶ ಪೂಜಾರಿ ಸಭೆಯಲ್ಲಿ ಹೇಳಿದರು.
ತಿ.ನ ಶ್ರೀನಿವಾಸ ಮೂರ್ತಿ, ಎಸ್ ಎಲ್ ರಾಜಕುಮಾರ ಕಾರ್ಗಲ್ ಗ್ರಾಮ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ, ಶಿವಾನಂದ ಕುಗ್ಗೆ ಹಿರಿಯ ಹೋರಾಟಗಾರ, ರೈತ ಸಂಘದ ಅಧ್ಯಕ್ಷ ವೀರಭದ್ರ ನಾಯ್ಕ, ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ದಿನೇಶ್ ನಾಯ್ಕ, ಲಕ್ಷ್ಮಿ ರಾಜು ಪಟ್ಟಣ ಪಂಚಾಯತ ಸದಸ್ಯೆ, ರವಿ ಕುಗ್ಗೆ ಜಿಲ್ಲಾ ಪಂಚಾಯತ ಸದಸ್ಯ, ನವೀನ್ ಕುಮಾರ, ನಾಗರಾಜ ಮರಾಠಿ, ಜಗದೀಶ್ ಕಾರ್ಗಲ್, ಉಮೇಶ್, ಮಹಮ್ಮದ್ ಸಲಾಂ ಜೋಗ, ವಿಜಯ ಕುಮಾರ ಕಾರ್ಗಲ್, ಗೋಪಾಲ ಕೃಷ್ಣ,ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತಾಲೂಕಾದ್ಯಂತ 700ಕ್ಕೂ ಮಿಕ್ಕಿ ಅರಣ್ಯವಾಸಿಗಳು ಭಾಗವಹಿಸಿ ಮೇಲ್ಮನವಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.