ಅಂಕೋಲಾ : ಹಟ್ಟಿಕೇರಿ (ಪಾಂಡುಪರ ) ಹಳ್ಳದಲ್ಲಿ ಭಾರೀ ಗಾತ್ರದ ಕಾಡುಕೋಣದ ಕಳೇಬರ ಪತ್ತೆಯಾದ ಘಟನೆ ತಾಲೂಕಿನ ಬೆಲೇಕೇರಿ ಗ್ರಾಪಂ ವ್ಯಾಪ್ತಿಯ ಬೊಗ್ರಿಗದ್ದೆಯಲ್ಲಿ ನಡೆದಿದೆ. ಜೂನ್ 30 ರ ಶುಕ್ರವಾರ ಸಂಜೆಯ ವೇಳೆಗೆ ಹಳ್ಳದ ನೀರಿನಲ್ಲಿ ಭಾರೀ ಗಾತ್ರದ ಪ್ರಾಣಿಯೊಂದು ತೇಲಿ ಬರುತ್ತಿರುವುದನ್ನು ಕಂಡ ಸ್ಥಳೀಯರು ಹತ್ತಿರದಿಂದ ಅದನ್ನು ಗಮನಿಸಿದಾಗ ಕಾಡುಕೋಣದ ಕಳೇಬರವೆಂದು ಗುರುತಿಸಿದ್ದಾರೆ.
ನಂತರ ಬೊಗ್ರಿಗದ್ದೆಯ ಕಟ್ಟಿಗೆ ಮಿಲ್ ಸಮೀಪದ ಸೇತುವೆ ಬಳಿ ವನ್ಯಜೀವಿ ಸಂರಕ್ಷಣಾ ತಂಡದ ಸದಸ್ಯ ಅವರ್ಸಾದ ಮಹೇಶ ನಾಯ್ಕ ಮತ್ತಿತರರು ಹಳ್ಳದ ನೀರಿನಲ್ಲಿ ತೇಲಿ ಬಂದಿದ್ದ ಕಾಡು ಕೋಣದ ಕಳೇಬರ ನೀರಿನ ಹರಿವಿಗೆ ಮುಂದೆ ಸಾಗದಂತೆ ಹಗ್ಗ ಕಟ್ಟಿ ತಡೆ ಹಿಡಿದಿದ್ದಾರೆ. ವಿಷಯ ತಿಳಿದ ವಲಯ ಅರಣ್ಯ ಅಧಿಕಾರಿ ಜಿ. ವಿ ನಾಯ್ಕ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಬಂದಿದ್ದು, ನಂತರ ಸ್ಥಳೀಯ ಕ್ರೇನ್ ಬಳಸಿ,ಕಾಡುಕೋಣದ ಕಳೇಬರವನ್ನು ನೀರಿನಿಂದ ಮೇಲೆತ್ತಿ, ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.
ಕಾಡುಕೋಣದ ಕತ್ತಿನ ಭಾಗದಲ್ಲಿ ಪೆಟ್ಟು ಬಿದ್ದಂತಿದ್ದು ರಕ್ತ ಸೋರಿಕೆಯಾದಂತಿದ್ದು, ಕಾಡುಕೋಣ ಕಳ್ಳ ಬೇಟೆಗಾರರ ಗುಂಡೇಟಿಗೆ ಅಥವಾ ಕ್ರೂರ ಪ್ರಾಣಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ನೀರಿಗೆ ಬಿದ್ದು ಹಳ್ಳದ ಸೆಳೆತಕ್ಕೆ ಸಿಲುಕಿ ಸಾವನಪ್ಪಿರಬಹುದೆಂಬ ಶಂಕೆ ವ್ಯಕ್ತವಾಗಿದೆ.