ಯಲ್ಲಾಪುರ: ಷಡ್ಜ ಕಲಾಕೇಂದ್ರ ಹಾಗೂ ಸುದರ್ಶನ ಸೇವಾ ಪ್ರತಿಷ್ಠಾನ ಆನಗೋಡು ಆಶ್ರಯದಲ್ಲಿ ಆನಗೋಡ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆಷಾಢ ಏಕಾದಶಿಯಂದು ಸಂತ ಭದ್ರಗಿರಿ ಅಚ್ಯುತದಾಸರ ಸಂಸ್ಮರಣೆ ಹಾಗೂ ಕೇಶವದಾಸ ಜನ್ಮದಿನದ ಅಂಗವಾಗಿ ಆಧ್ಯಾತ್ಮ ಚಿಂತನ ಕಾರ್ಯಕ್ರಮ ನಡೆಯಿತು.
ಮಂಡ್ಯದ ಹರಿಕಥಾ ದಾಸರಾದ ಮಧುಸೂದನ ದಾಸ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಕೋರಿದರು. ಧಾರ್ಮಿಕ ಉಪನ್ಯಾಸ ನೀಡಿದ ಕೂಲಿಬೇಣ ವೇದಮೂರ್ತಿ ಗಣಪತಿ ಭಟ್ಟ ಮಾತನಾಡಿ, ಪುಣ್ಯ ಕ್ಷೇತ್ರದಲ್ಲಿ ಈ ರೀತಿ ಧಾರ್ಮಿಕ ಕಾರ್ಯಕ್ರಮಗಳು ಲೋಕಕಲ್ಯಾಣಕ್ಕೆ ಕಾರಣವಾಗುತ್ತದೆ. ಎಲ್ಲೆಡೆ ಇಂತಹ ಸತ್‌ಸಂಗಗಳು ನಡೆಯುವಂತಾಗಬೇಕು. ತನ್ಮೂಲಕ ಸಾತ್ವಿಕ ಸಮಾಜ ನಿರ್ಮಾಣವಾಗುವುದಕ್ಕೆ ಸಹಕಾರಿಯಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸುದರ್ಶನ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗಣಪತಿ ಮಾನಿಗದ್ದೆ ಮಾತನಾಡಿ, ಸಂಸಾರದ ತೊಡಕುಗಳನ್ನು ಮರೆತು ಭಗವಂತನ ಆರಾಧನೆ ಮಾಡಲು ಆಷಾಡ ಏಕಾದಶಿ ನಮಗೊಂದು ಪುಣ್ಯಾವಕಾಶ ಎಂದರು. ಕೇರಳದ ಕಾಸರಗೋಡಿನ ರಾಮಕೃಷ್ಣ ಕಾಟಕುಕ್ಕೆ, ಈಶ್ವರದಾಸ ಕೊಪ್ಪೆಸರ, ರಾಮಕೃಷ್ಣ ಕವಡಿಕೇರಿ ಮುಂತಾದವರು ವೇದಿಕೆಯಲ್ಲಿದ್ದರು. ರಾಜಶೇಖರ ಧೂಳಿ ನಿರ್ವಹಿಸಿದರು. ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.