ದಾಂಡೇಲಿ: ನಗರದ ಬಂಗೂರನಗರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾ ವಿದ್ಯಾಲಯದ ರಂಗನಾಥ ಗ್ರಂಥಾಲಯದ ಸಭಾಭವನದಲ್ಲಿ ಮಹಾವಿದ್ಯಾಲಯದ ರೆಡ್‌ಕ್ರಾಸ್, ರೆಡ್ ರಿಬ್ಬನ್ ಕ್ಲಬ್ ಐಕ್ಯೂಎಸಿ, ರೋಟರಿಕ್ಲಬ್ ಹಾಗೂ ಅರಣ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವನ್ಯಜೀವಿ ಸಂರಕ್ಷಣೆ ಮತ್ತು ಪ್ರಥಮ ಚಿಕಿತ್ಸೆ ಬಗ್ಗೆ ಒಂದು ದಿನದ ಕಾರ್ಯಾಗಾರವು ಯಶಸ್ವಿಯಾಗಿ ಸಂಪನ್ನಗೊoಡಿತು.
ಕಾರ್ಯಕ್ರಮವನ್ನು ರೋಟರಿ ಕ್ಲಬ್‌ನ ಅಧ್ಯಕ್ಷರಾದ ಸುಧಾಕರ ಶೆಟ್ಟಿಯವರು ಉದ್ಘಾಟಿಸಿ ಸಮೃದ್ದ ಹಾಗೂ ದಟ್ಟ ಕಾಡಿನ ನಡುವಿನ ನಗರದಲ್ಲಿ ವಾಸವಿರುವ ನಮಗೆ ವನ್ಯಜೀವಿ ಸಂರಕ್ಷಣೆ ಮತ್ತು ಪ್ರಥಮ ಚಿಕಿತ್ಸೆಯ ಬಗ್ಗೆ ತಿಳುವಳಿಕೆ ಅತೀ ಅವಶ್ಯವಾಗಿ ಬೇಕಾಗಿದೆ. ಈ ನಿಟ್ಟಿನಲ್ಲಿ ಈ ಕಾರ್ಯಾಗಾರ ಮಹತ್ವಪೂರ್ಣವೆನಿಸಿದೆ ಎಂದರು.
ಕಾಲೇಜಿನ ಪ್ರಾಚಾರ್ಯರಾದ ಡಾ.ಬಿ.ಎಲ್.ಗುಂಡೂರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಕಾರ್ಯಕ್ರಮದ ಅನಿವಾರ್ಯತೆಯನ್ನು ವಿವರಿಸಿದರು. ವೇದಿಕೆಯಲ್ಲಿ ರೋಟರಿ ಕ್ಲಬಿನ ಪ್ರಮುಖರುಗಳಾದ ಎಸ್. ಸೋಮಕುಮಾರ, ಲಿಯೊ ಪಿಂಟೊ,. ಅಶುತೋಷರಾಯ್, ರಾಹುಲ್ ಬಾವಾಜಿ, ಕಾಲೇಜಿನ ಉಪ ಪ್ರಾಚರ‍್ಯರುಗಳಾದ ಪ್ರೊ. ಎಸ್.ಎಸ್.ಹಿರೇಮಠ ಮತ್ತು ಡಾ. ನಯನಾ ರೇವಣಕರ, ಪ್ರಾಧ್ಯಾಪಕರಾದ ಡಾ. ಪಿ.ಎ. ಹೊಸಮನಿ ಮತ್ತು ರೆಡ್ ಕ್ರಾಸ್ ಘಟಕದ ನಾಯಕಿ ಆನ್‌ರುತ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅರಣ್ಯ ಇಲಾಖೆಯ ಉಪ ವಲಯಾರಣ್ಯಾಧಿಕಾರಿ ಹಾಗೂ ವನ್ಯಜೀವಿ ಕ್ಷೇತ್ರದಲ್ಲಿ ಅಪಾರ ಅನುಭವವನ್ನು ಹೊಂದಿರುವ ಮತ್ತು ಉರಗ ತಜ್ಞ ಸಿ.ಆರ್. ನಾಯ್ಕ ಅವರು ಭಾಗವಹಿಸಿ, ವಿವಿಧ ತಳಿಯ ಹಾವುಗಳ ಕುರಿತು ವಿಸ್ತೃತ ಮಾಹಿತಿಯನ್ನು ನೀಡುವುದರ ಜೊತೆಗೆ ಅವುಗಳನ್ನು ರಕ್ಷಿಸುವ ವಿಧಾನವನ್ನು ಪ್ರದರ್ಶನ ನೀಡಿದರು ಹಾಗೂ ಹಾವುಗಳು ಕಚ್ಚಿದಾಗ ಹೇಗೆ ಪ್ರಥಮ ಚಿಕಿತ್ಸೆಯನ್ನು ನೀಡಬೇಕು ಎನ್ನುವುದನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಪ್ರವಾಸೋದ್ಯಮಿ ರವಿಕುಮಾರ್.ಜಿ. ನಾಯಕ ಅವರು ಪ್ರವಾಸೋದ್ಯಮ ಚಟುವಟಿಕೆಯಲ್ಲಿ ಅವಘಡಗಳು ನಡೆದಾಗ ಹೇಗೆ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ಹೇಳಿದರು.