ಹೊನ್ನಾವರ: ಪೊಲೀಸ್ ಠಾಣೆಯಲ್ಲಿ ಮೃತಪಟ್ಟಿರುವ ದಿಲೀಪ್ ಮಂಡಲ್ ಮರಣೋತ್ತರ ಪರೀಕ್ಷೆ ಮಂಗಳವಾರ ತಾಲೂಕು ಆಸ್ಪತ್ರೆಯಲ್ಲಿ ಕಾರವಾರದ ಮೆಡಿಕಲ್ ಕಾಲೇಜು ವೈದ್ಯರಿಂದ ನೆರವೇರಿತು.
ಜೂ.23ರಂದು ಬಂಗಾರ ತೊಳೆಯಲು ಪಟ್ಟಣದ ಮನೆಯೊಂದಕ್ಕೆ ಹೋದಾಗ ಮೋಸ ಮಾಡಲಾಗಿದೆ ಎಂದು ದೂರಿನ್ವಯ ಠಾಣೆಗೆ ತಂದು ವಿಚಾರಣೆಯಲ್ಲಿದ್ದಾಗ ಜೂ.24ರಂದು ಸೈನೆಡ್ ಎನ್ನುವ ವಿಷವನ್ನು ಕುಡಿದು ಬಿಹಾರದ ದಿಲೀಪ್ ಮಂಡಲ್ ಮೃತಪಟ್ಟಿದ್ದರು. ಆ ಬಳಿಕ ಹಿರಿಯ ಅಧಿಕಾರಿಗಳು ಸಿಪಿಐ, ಪಿಎಸೈ, ಮೂವರು ಸಿಬ್ಬಂದಿಗಳನ್ನು ಅಮಾನತು ಮಾಡಿದ್ದರು. ಬಿಹಾರ ಮೂಲದವರಾಗಿರುದರಿಂದ ಮೃತರ ಕಡೆಯವರು ಆಗಮಿಸಲು ವಿಳಂಬವಾಗುವುದರಿoದ ಖಾಸಗಿ ಆಸ್ಪತ್ರೆಯಲ್ಲಿ ಇಡಲಾಗಿತ್ತು.
ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಿಹಾರದಿಂದ ಮೃತ ವ್ಯಕ್ತಿಯ ತಾಯಿ ಶಾಂತಾದೇವಿ, ಕುಟುಂಬ ಸದಸ್ಯರು, ಸಂಬoಧಿಕರು ಸೇರಿ ಒಟ್ಟು 7 ಜನ ಆಗಮಿಸಿ ಮೃತ ವ್ಯಕ್ತಿಯ ಗುರುತಿಸಿದ ಬಳಿಕ ಹೊನ್ನಾವರ ಜೆ.ಎಮ್.ಎಫ್.ಸಿ ಪ್ರಿನ್ಸಿಪಲ್ ನ್ಯಾಯಾಧೀಶ ಚಂದ್ರಶೇಖರ ಬಣಕಾರ ಉಪಸ್ಥಿತಿಯಲ್ಲಿ ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ. ತಾಯಿಯ ಹೇಳಿಕೆ ಪಡೆದ ನಂತರ ಖಾಸಗಿ ಆಸ್ಪತ್ರೆಲ್ಲಿದ್ದ ಮೃತದೇಹವನ್ನು ಅಂಬುಲೆನ್ಸ ಮೂಲಕ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಮರಣೊತ್ತರ ಪರೀಕ್ಷೆ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಕಾರವಾರದ ಮೆಡಿಕಲ್ ಕಾಲೇಜಿನಿಂದ ಬಂದಿರುವ ವೈದ್ಯಾಧಿಕಾರಿಗಳಿಂದ ನೇರವೇರಿತು. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹ ಬಿಹಾರ ಕೊಂಡೊಯ್ಯದೇ, ಹೊನ್ನಾವರದ ಶವಾಗಾರದಲ್ಲಿ ಅಂತ್ಯಸ0ಸ್ಕಾರ ಮಾಡುವುದಾಗಿ ಕುಟುಂಬದವರು ತಿಳಿಸಿರುವುದರಿಂದ ಮಂಗಳವಾರ ರಾತ್ರಿ ಈ ಕಾರ್ಯ ನಡೆಯಲಿದೆ.
ಠಾಣೆಯಲ್ಲಿ ಮೃತನ ಜೊತೆಗೆ ಇದ್ದ ಬಿಹಾರ ಮೂಲದ ಇನ್ನೊಬ್ಬ ವ್ಯಕ್ತಿ ದೀವನ್‌ಕುಮಾರ ಎಂಬಾತನ ಹೇಳಿಕೆಯನ್ನು ಹೊನ್ನಾವರ ಹೆಚ್ಚುವರಿ ಜೆ.ಎಮ್.ಎಫ್.ಸಿ ನ್ಯಾಯಾಧೀಶ ಈರಣ್ಣ ಹುಣಸಿಕಟ್ಟಿ ಸಮ್ಮುಖದಲ್ಲಿ ದಾಖಲಿಸಿಕೊಳ್ಳಲಾಯಿತು. ಪ್ರಕರಣದ ತನಿಖೆಗೆ ಆಗಮಿಸಿರುವ ಸಿಐಡಿ ಅಧಿಕಾರಿಗಳು ಹೊನ್ನಾವರದಲ್ಲೇ ಬಿಡುಬಿಟ್ಟಿದ್ದು, ಮಂಗಳವಾರ ಘಟನಾ ಸ್ಥಳ, ಆಸ್ಪತ್ರೆಯ ಮೃತದೇಹ ಮತ್ತಿತರ ಮಾಹಿತಿ ಕಲೆಹಾಕಿದ್ದು, ಬುಧವಾರ ಕುಟುಂಬ ಸದಸ್ಯರಿಂದ ಮಾಹಿತಿ ಪಡೆಯುವ ಸಾಧ್ಯತೆ ಇದೆ. ಸಿಐಡಿ ಅಧಿಕಾರಿಗಳಿಗೆ ಅಧಿಕೃತವಾಗಿ ಪ್ರಕರಣ ವರ್ಗಾವಣೆ ಆಗದೇ ಇದ್ದರೂ ಪ್ರಾಥಮಿಕ ತನಿಖೆಯನ್ನು ನಡೆಸಿ ದಾಖಲೆ ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ. ಆ ನಂತರ ವಿಚಾರಣೆ ತೀವ್ರಗೊಳ್ಳುವ ಸಾಧ್ಯತೆ ಇದೆ.