ಹಳಿಯಾಳ: ತಾಲೂಕಿನ ಗುಂಡೊಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೆಳೆದ ವಿಷಕಾರಿ ಬೀಜ ತಿಂದು10ಕ್ಕೂ ಅಧಿಕ ಮಕ್ಕಳು ಅಸ್ವಸ್ಥರಾದ ಘಟನೆ ನಡೆದಿದೆ.
ಶಾಲೆಯ ಆವರಣದಲ್ಲಿ ಬೆಳೆದಿದ್ದ ಕಾಡು ಗಿಡದ ಬೀಜವನ್ನು ಶೇಂಗಾ ಬೀಜವೆಂದು ತಿಳಿದು 1,2 ಮತ್ತು 3 ನೇ ತರಗತಿಯ ಹತ್ತಕ್ಕೂ ಹೆಚ್ಚು ಮಕ್ಕಳು ತಿಂದಿದ್ದು, ಶಾಲೆಯಿಂದ ಮನೆಗೆ ಹೋದಾಗ ವಾಂತಿ ಭೇದಿ ಪ್ರಾರಂಭವಾಗಿ ಅಸ್ವಸ್ಥರಾಗಿದ್ದಾರೆ. ತಕ್ಷಣ ಪೋಷಕರು ಕಾಳಗಿನಕೊಪ್ಪ ಗ್ರಾಮದ ಸರಕಾರಿ ಆಸ್ಪತ್ರೆ ಹಾಗೂ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದು,ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಕ್ಕಳಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ. ಗಣೇಶ ಅರಶೀಗೇರಿ ಮಾಹಿತಿ ನೀಡಿ, ಅಸ್ವಸ್ಥಗೊಂಡ ಮಕ್ಕಳಗೆ ಚಿಕಿತ್ಸೆ ನೀಡಿದ್ದು ಬಹುಹೇಶ ಮಕ್ಕಳ ಆರೋಗ್ಯ ಸ್ಥಿರವಾಗಿದ್ದು, ಮೂವರು ಮಕ್ಕಳ ಚಿಕಿತ್ಸೆ ಮುಂದುವರೆದಿದೆ,ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಮಕ್ಕಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸಿಪಿಐ ಸುರೇಶ ಶಿಂಗೆ, ಪಿಎಸ್ಐ ವಿನೋದ ರೆಡ್ಡಿ, ಅಪರಾಧ ವಿಭಾಗದ ಪಿಎಸ್ಐ ಅಮಿನಸಾಬ್ ಅತ್ತಾರ ಹಾಗೂ ಸಿಬ್ಬಂದಿ ನಾಗೇಂದ್ರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಲಾ ಶಿಕ್ಷಕರು, ಎಸ್.ಡಿ.ಎಂ.ಸಿ ಕಮಿಟಿಯ ಸದಸ್ಯರು ಹಾಜರಿದ್ದರು.