• Slide
    Slide
    Slide
    previous arrow
    next arrow
  • ಸಾಹಿತಿಯಾಗಲು ಪರಿಶ್ರಮ ಅತ್ಯಗತ್ಯ: ಡಿ.ಎಸ್.ನಾಯ್ಕ್

    300x250 AD

    ಶಿರಸಿ :ಸಾಹಿತಿ ಹಾಗೂ ಕವಿ ಎನ್ನಿಸಿಕೊಳ್ಳಲು ಹೆಚ್ಚು ಪರಿಶ್ರಮ ಅಗತ್ಯ. ನಾವೆಲ್ಲ ಕೇವಲ ಬರಹಗಾರರು ಮಾತ್ರ. ಸಾಹಿತಿಗಳು ಅಲ್ಲ. ಎಂದು ಹಿರಿಯ ಕಥೆಗಾರ ಕಲಾರಂಗ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರು ಆಗಿರುವ ಡಿ.ಎಸ್ ನಾಯ್ಕರು ನುಡಿದರು.

    ನೆಮ್ಮದಿ ಕುಟೀರದಲ್ಲಿ ನಡೆದ ಪಿ.ಎನ್.ನಾಗೇಂದ್ರರವರು ರಚಿಸಿರುವ ‘ಹೊಸ ತಿರುವ’ ಕಾದಂಬರಿಯ ಬಿಡುಗಡೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಭಾಗವಹಿಸಿ ಮಾತನಾಡಿದರು. ಎಲ್ಲರೂ ತಾವು ಕವಿ ಹಾಗೂ ಸಾಹಿತಿಗಳು ಎಂದುಕೊಳ್ಳುತ್ತಾರೆ. ಆದರೆ, ಸಾಹಿತಿಗಳು ಎನಿಸಿಕೊಳ್ಳುವುದಕ್ಕೂ ಒಂದಿಷ್ಟು ಪರಿಶ್ರಮದ ಅಗತ್ಯತೆ ಇದೆ. ಕಾದಂಬರಿಯ ಬರಹಗಾರರು ಈಗ ಕಡಿಮೆಯಾಗಿದ್ದಾರೆ ಅಂತಹ ಸಮಯದಲ್ಲಿ ಪಿ.ಎನ್ ನಾಗೇಂದ್ರರವರು ಒಳ್ಳೆಯ ಸಾಧನೆಯನ್ನು ಮಾಡಿದ್ದಾರೆ ಎಂದರು.

    ‘ಹೊಸತಿರುವು’ ಕಾದಂಬರಿಯನ್ನು ಬಿಡುಗಡೆ ಮಾಡಿರುವ ಮನೋಹರ ಮಲ್ಮನೆಯವರು ಮಾತನಾಡಿ, ಹಲವು ಕವನಗಳನ್ನು ಬರೆದು ಜನಪ್ರಿಯರಾಗಿರುವ ಪಿ.ಎನ್. ನಾಗೇಂದ್ರರವರು ಮೊದಲ ಬಾರಿ ಕಾದಂಬರಿಯನ್ನು ಬರೆದಿದ್ದಾರೆ. ಮುನ್ನುಡಿಯನ್ನು ಬರೆಯುವಾಗ ಎರಡೆರಡು ಬಾರಿ ಓದಿ ಉತ್ತಮವಾದ ಮುನ್ನುಡಿಯನ್ನು ಬರೆದಿದ್ದೇನೆ. ಅವರ ಹನ್ನೊಂದನೇ ಕೃತಿ ಇದು. ಕಾದಂಬರಿಯ ಕ್ಷೇತ್ರಕ್ಕೆ ಹೊಸ ಹೆಜ್ಜೆಯನ್ನು ಇಡುತ್ತಿದ್ದಾರೆ, ಅವರ ಶೈಲಿ ಉತ್ತಮವಾಗಿದೆ. ನಂಬಿಕೆ ಮುಖ್ಯ ಮೌಢ್ಯತೆ ಅಲ್ಲ ಎನ್ನುವುದನ್ನು ಈ ಕಾದಂಬರಿಯಲ್ಲಿ ಹೇಳಿದ್ದಾರೆ. ಒಂದು ಪ್ರೇಮಕಥೆ ಎನಿಸಿಕೊಂಡಿರುವ ಈ ಕಥೆಯು ಅಷ್ಟೇ ಓದಿಸಿಕೊಂಡು ಹೋಗುತ್ತದೆ ಎಂದರು.
    ಪುಸ್ತಕದ ಪರಿಚಯವನ್ನು ಮಾಡಿದ ಗಣಪತಿ ಭಟ್ಟ ವರ್ಗಾಸರ, ಕಾದಂಬರಿಯೊಳಗಿನ ಕಥೆಯು ಸುಂದರವಾಗಿದ್ದು ಹಲವು ವಿಶೇಷ ತಿರುವುಗಳನ್ನು ಹೊಂದಿರುವುದಾಗಿದೆ. ಎಂದು ಹೇಳಿ ಕೃತಿಯ ವಿಶೇಷತೆಗಳನ್ನು ತಿಳಿಸಿದರು.

    ಮುಖ್ಯ ಅತಿಥಿಯಾಗಿ ಆಗಮಿಸಿರುವ ಕಸಾಪದ ಪ್ರೊ.ಡಾ.ಜಿ.ಎ ಹೆಗಡೆ ಸೋಂದಾ ಕಾದಂಬರಿ ಎನ್ನುವ ಹೆಸರಿನ ವಿಶೇಷಗಳನ್ನು ಹೇಳಿದರು. ರವೀಂದ್ರನಾಥ ಠಾಗೂರರ ಜೀವನ ಚರಿತ್ರೆಯ ಮೇಲೆ ಬಂದಿರುವ ಬಂಗಾಲಿ ಸಿನೆಮಾದ ಕಥೆಯನ್ನು , ಅಲ್ಲಿ ಬರುವ ಕಾದಂಬರಿ ಎನ್ನುವ ಹೆಸರಿನ ಪಾತ್ರವನ್ನು ಮನಮುಟ್ಟುವಂತೆ ವಿವರಣೆ ನೀಡಿದರೆ, ಹಲವು ಭಾಷೆಗಳಲ್ಲಿ ಕಾದಂಬರಿಯ ಹೆಸರು ಬದಲಾಗದೇ ಹಾಗೆಯೇ ಉಳಿದುಕೊಂಡಿದೆ. ಈಗೀಗ ಕಾದಂಬರಿಯ ಬರವಣಿಗೆ ಕಡಿಮೆಯಾಗಿದೆ, ಪಿ.ಎನ್. ನಾಗೇಂದ್ರರವರು ಉತ್ತಮವಾದ ಕೆಲಸವನ್ನು ಮಾಡಿದ್ದಾರೆ ಎಂದು ಅವರ ಕೆಲ ಹನಿಗವನವನ್ನು ಹೇಳಿ ಮೆಚ್ಚಿಕೊಂಡರು.

    ಕಸ್ತೂರಿ ಸಿರಿಗನ್ನಡ ವೇದಿಕೆಯ ಶಿರಸಿ ಅಧ್ಯಕ್ಷರು ಹಾಗೂ ಕೃತಿಕಾರರಾದ ಪಿ.ಎನ್ ನಾಗೇಂದ್ರ ಮಾತನಾಡುತ್ತಾ ತಾನು ಸಾಹಿತಿಯಲ್ಲ. ಕೇವಲ ಬರಹಗಾರ ಮಾತ್ರ. ಹಲವು ಕಡೆ ಓಡಾಡುವ ಉದ್ಯೋಗದಲ್ಲಿರುವ ತನಗೆ ಹಲವು ಅನುಭವಗಳೇ ಕಥೆಯಾಗಿವೆ. ತನ್ನ ಮೊದಲ ಪ್ರಯತ್ನ ಇದಾಗಿದೆ ಎಂದರು.

    300x250 AD

    ಇದೇ ಕಾರ್ಯಕ್ರಮದಲ್ಲಿ ಆರ್.ಡಿ.ಹೆಗಡೆ ಆಲ್ಮನೆಯವರ ‘ತುಂಬಿದ ಬಟ್ಟಲು ಹಾಗೂ ಇತರ ಬರಹಗಳು’ ಎನ್ನುವ ಕೃತಿಯನ್ನು ಉಪನ್ಯಾಸಕಿ ಭವ್ಯಾ ಹಳೆಯೂರು ಪರಿಚಯಿಸಿದರು. ಹಿರಿಯರ ಅನುಭವದ ಮಾತಿನಂತಿರುವ ಈ ಕೃತಿಯು ಆಕರ್ಷಕವಾದ ವಿಷಯಗಳನ್ನು ಒಳಗೊಂಡಿದೆ ಎಂದು ಅದರ ಕಿರು ಪರಿಚಯ ಮಾಡಿದರು. ಆರ್. ಡಿ ಹೆಗಡೆ ಆಲ್ಮನೆಯವರು ಮಾತನಾಡಿ ತನ್ನ ಕೃತಿಯನ್ನು ಲೋಕಾರ್ಪಣೆ ಮಾಡುವುದಿಲ್ಲ. ಓದುವ ಹವ್ಯಾಸದವರಿಗೆ ನೀಡುತ್ತೇನೆ. ಇಂದು ನನ್ನ ಕೃತಿಯ ಪರಿಚಯವಾಗಿದ್ದು ಸಂತೋಷವಾಯಿತು ಎಂದರು.

    ಈ ಕಾರ್ಯಕ್ರಮದಲ್ಲಿ ಕವಿಗೋಷ್ಟಿಯೂ ನಡೆಯಿತು. ಜಗದೀಶ ಭಂಡಾರಿ, ಜಯಪ್ರಕಾಶ ಹಬ್ಬು, ಜಲಜಾಕ್ಷಿ ಶೆಟ್ಟಿ, ಸುಜಾತಾ ಹೆಗಡೆ, ಉಮೇಶ ದೈವಜ್ಞ, ಡಿ.ಎಮ್.ಭಟ್ ಕುಳವೆ, ಅನಂತ ಹೆಗಡೆ ಬಾಳೆಗದ್ದೆ, ಶೋಭಾ ಭಟ್, ಗೋಪಿ ಸಸಿತೋಟ,ವಿಮಲಾ ಭಾಗ್ವತ ಮುಂತಾದವರು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.

    ವಿಮಲಾ ಭಾಗ್ವತ್ ಪ್ರಾರ್ಥಿಸಿದರು. ಜಯಪ್ರಕಾಶ ಹಬ್ಬು ಅವರು ಎಲ್ಲರನ್ನು ಪರಿಚಯಿಸಿ ಸ್ವಾಗತಿಸಿದರು. ಕೇ.ಕ.ಸಾ.ವೇದಿಕೆ ಶಿರಸಿ ಅಧ್ಯಕ್ಷರಾದ ಕೃಷ್ಣ ದತ್ತಾತ್ರೇಯ ಪದಕಿಯವರು ವಂದಿಸಿದರು. ಕವಯತ್ರಿ ಸುಜಾತ ದಂಟ್ಕಲ್ ನಿರೂಪಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top