ನವದೆಹಲಿ: ಸಿರಿಧಾನ್ಯಗಳ ಪ್ರಯೋಜನಗಳನ್ನು ಮತ್ತು ಪ್ರಪಂಚದ ಹಸಿವನ್ನು ನಿವಾರಿಸುವ ಅದರ ಸಾಮರ್ಥ್ಯವನ್ನು ಸಾರುವ ವಿಶೇಷ ಗೀತೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗ್ರ್ಯಾಮಿ ಪ್ರಶಸ್ತಿ ವಿಜೇತ ಭಾರತೀಯ-ಅಮೆರಿಕನ್ ಗಾಯಕ ಫಲ್ಗುಣಿ ಶಾ ಅವರೊಂದಿಗೆ ಕೈಜೋಡಿಸಿದ್ದಾರೆ. ಫಲ್ಗುಣಿ ಮತ್ತು ಅವರ ಪತಿ ಮತ್ತು ಗಾಯಕ ಗೌರವ್ ಶಾ ನಿರ್ಮಿಸಿರುವ “ದಿ ಅಬಂಡನ್ಸ್ ಇನ್ ಮಿಲೆಟ್ಸ್” ಹಾಡು ಜೂನ್ 16 ರಂದು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗಲಿದೆ.
ಈ ಹಾಡಿನ ನಡುವೆ ಮೋದಿಯವರ ಧ್ವನಿಯೂ ಇರಲಿದೆ. ಇದರಲ್ಲಿ ಅವರು ಸಿರಿಧಾನ್ಯದ ಮಹತ್ವ ಸಾರಿದ್ದಾರೆ. ಹಾಡನ್ನು ಮೋದಿ ಜೊತೆ ಕುಳಿತು ಬರೆಯಲಾಗಿದೆ ಎಂದು ಫಲ್ಗುಣಿ ಹೇಳಿದ್ದಾರೆ.
“ಗ್ರ್ಯಾಮಿ ಗೆದ್ದ ನಂತರ ದೆಹಲಿಯಲ್ಲಿ ಮೋದಿಯವರನ್ನು ಭೇಟಿಯಾದಾಗ ಸಿರಿಧಾನ್ಯ ಬಗ್ಗೆ ಹಾಡನ್ನು ಬರೆಯುವ ಆಲೋಚನೆ ನನಗೆ ಬಂದಿತು. ಬದಲಾವಣೆಯನ್ನು ತರಲು ಮತ್ತು ಮಾನವೀಯತೆಯನ್ನು ಎತ್ತಿ ಹಿಡಿಯುವಲ್ಲಿ ಸಂಗೀತದ ಶಕ್ತಿಯ ಕುರಿತ ಚರ್ಚೆಯ ಸಮಯದಲ್ಲಿ ಹಸಿವನ್ನು ಕೊನೆಗೊಳಿಸುವ ಸಂದೇಶವನ್ನು ಹೊಂದಿರುವ ಹಾಡನ್ನು ಬರೆಯಬೇಕೆಂದು ಮೋದಿ ಸಲಹೆ ನೀಡಿದರು, ಅದರಂತೆ ದಿ ಅಬಂಡನ್ಸ್ ಇನ್ ಮಿಲೆಟ್ಸ್ ಸಿದ್ಧವಾಯಿತು” ಎಂದು ಹೇಳಿದ್ದಾರೆ.
2023 ನೇ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಗೊತ್ತುಪಡಿಸಲಾಗಿದೆ, ಇದರ ಪ್ರಸ್ತಾಪವನ್ನು ಭಾರತವು ಮುಂದಿಟ್ಟಿತು ಮತ್ತು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಆಡಳಿತ ಮಂಡಳಿಗಳ ಸದಸ್ಯರು ಇದನ್ನು ಅನುಮೋದಿಸಿದರು.