• Slide
  Slide
  Slide
  previous arrow
  next arrow
 • ಕ್ಷೇತ್ರದ ಎಲ್ಲಾ ಜನತೆಯ ಶಾಸಕನಾಗಿ ಕೆಲಸ ಮಾಡಲು ಇಚ್ಚಿಸುತ್ತೇನೆ: ಭೀಮಣ್ಣ ನಾಯ್ಕ

  300x250 AD

  ಸಿದ್ದಾಪುರ: ನಾನು ಒಬ್ಬ ಸಾಮಾನ್ಯ ಮನುಷ್ಯ. ಶಾಸಕನೆಂಬ ಅಹಂ ನನ್ನಲ್ಲಿಲ್ಲ. ನಾನು ನಿಮ್ಮೆಲ್ಲರ ಜೊತೆಯಲ್ಲಿರುವ ಈ ಕ್ಷೇತ್ರದ ಶಾಸಕ ಪ್ರತಿನಿಧಿ ಅಷ್ಟೇ. ನಿಮ್ಮೆಲ್ಲರ ಅಹವಾಲುಗಳನ್ನು ಆಲಿಸಿ ವಿಧಾನಸೌಧದಲ್ಲಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಮಾಡುವ ನಿಮ್ಮ ಪ್ರತಿನಿಧಿ. ನನ್ನ ಕ್ಷೇತ್ರದ ಸಾರ್ವಜನಿಕರ ಸೇವೆಯನ್ನು ಪ್ರಮಾಣಿಕವಾಗಿ ನಾನು ಮಾಡಲು ಇಚ್ಚಿಸುತ್ತೇನೆ. ನಾನು ಯಾವುದೇ ಒಂದು ಗುಂಪು ಅಥವಾ ಸಮುದಾಯಕ್ಕೆ ಸೀಮಿತವಾಗಿರುವ ಶಾಸಕನೆಲ್ಲ. ನಾನು ಕ್ಷೇತ್ರದ ಎಲ್ಲಾ ಜನತೆಯ ಶಾಸಕನಾಗಿ ಕೆಲಸ ಮಾಡಲು ಇಚ್ಚಿಸುತ್ತೇನೆ ಎಂದು ಶಿರಸಿ- ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ಟಿ.ನಾಯ್ಕ ಹೇಳಿದರು.

  ಅವರು ಪಟ್ಟಣದ ಟಿ.ಎಂ.ಎಸ್ ಆವಾರದಲ್ಲಿ ಟಿ.ಎಂ.ಎಸ್ ಹಾಗೂ ತಾಲೂಕಿನ ಸೇವಾ ಸಹಕಾರಿ ಸಂಘಗಳು ಆಯೋಜಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಈ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದ ಜನತೆ, ಅನೇಕ ಸರ್ಕಾರಿ ಅರೆ ಸರ್ಕಾರಿ ನೌಕರರು ಸಂಘ ಸಂಸ್ಥೆಗಳ ಸದಸ್ಯರು, ಮತದಾರರು ಎಲ್ಲರೂ ಸೇರಿ ಅಭಿವೃದ್ಧಿಯ ನಿರೀಕ್ಷೆಯನ್ನು ಇಟ್ಟುಕೊಂಡು ನನ್ನನ್ನು ಆಯ್ಕೆ ಮಾಡಿದ್ದಾರೆ. ಜನಸೇವೆಗೆ ನನಗೆ ಅವಕಾಶವನ್ನು ಕೊಟ್ಟಿದ್ದಾರೆ. ನಾನು ಇಷ್ಟೊಂದು ಅಭಿವೃದ್ಧಿ ಕಾಮಗಾರಿಯನ್ನು ಮಾಡಿದ್ದೇನೆ. ಎಲ್ಲವೂ ನನ್ನಿಂದಲೇ ಆಗಿದೆ ಎನ್ನುವ ಅಹಂ ಶಾಸಕರಾದವರಿಗೆ ಇರಬಾರದು. ಜನಪ್ರತಿನಿಧಿ ಆದವನು ಅಹಂಕಾರಿಯಾಗಿರಬಾರದು ಎಂದರು.
  ಸಹಕಾರಿ ಸಂಘಗಳು ಎಂದರೆ ಸೊಸೈಟಿಗೆ ಹೋಗಿ ಸಾಲ ಪಡೆಯುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಸ್ವತಂತ್ರ ಪೂರ್ವದಲ್ಲಿಯೇ ಇಲ್ಲಿಯ ಅನೇಕ ಪೂರ್ವಜರು ಅಂದಿನ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಅವರ ದಬ್ಬಾಳಿಕೆಯ ವೇಳೆಯಲ್ಲಿ ರೈತರಿಗೆ ಆರ್ಥಿಕ ಸಹಾಯವನ್ನು ನೀಡುವ ನಿಟ್ಟಿನಲ್ಲಿ ಈ ಸಹಕಾರಿ ಸಂಘಗಳನ್ನು ಹುಟ್ಟು ಹಾಕಿದ್ದರು.ವ್ಯಕ್ತಿ ಪಕ್ಷ ಎಂಬ ಭೇದ ಭಾವವನ್ನು ಮರೆತು ಸಹಕಾರಿ ಸಂಘ ಎಂಬ ಪದಕ್ಕೆ ಇರುವ ಅರ್ಥಕ್ಕೆ ಪೂರ್ವಕವಾದ ಕೆಲಸವನ್ನು ಈ ಸಂಘಗಳು ಮಾಡಿದಾಗ ಮಾತ್ರ ಅದು ನಿಜವಾದ ಸಹಕಾರಿ ಸಂಘವಾಗುತ್ತದೆ. ಸಹಕಾರಿ ಸಂಘಗಳ ಬೈಲಾಗಳಿಗೆ ತಿದ್ದುಪಡಿಯನ್ನು ತರುವ ಮುಖಾಂತರ ಸರಳೀಕರಣದ ಮಾರ್ಗದ ಮುಖಾಂತರ ಸಹಕಾರಿ ಸಂಘಗಳ ಅಭಿವೃದ್ಧಿಗಾಗಿ ನಾನು ಎಂದೆಂದೂ ನಿಮ್ಮ ಜೊತೆಯಲ್ಲಿ ಇರುತ್ತೇನೆ ಎಂದರು.

  300x250 AD

  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟಿ.ಎಂ.ಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಮಾತನಾಡಿ, ಭೀಮಣ್ಣ ನಾಯ್ಕ ದಿವಂಗತ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಆದರ್ಶವನ್ನು ಮೈಗೂಡಿಸಿಕೊಂಡು, ಸಾರ್ವಜನಿಕ ಸೇವೆಗೆ ಇಳಿದ ಸರಳ- ಸಜ್ಜನ ಕ್ರೀಯಾಶೀಲ ವ್ಯಕ್ತಿ. ಕಳೆದ ನಾಲ್ಕು ದಶಕಗಳಿಂದ ಶಿರ್ಸಿ- ಸಿದ್ದಾಪುರ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ತೊಡಗಿಸಿಕೊಂಡು ಕ್ಷೇತ್ರದ ಜನರ ಸೇವೆಯನ್ನು ಪ್ರಾಮಾಣಿಕತೆಯಿಂದ ಮಾಡಿದ ವ್ಯಕ್ತಿ. ಕ್ಷೇತ್ರದ ಅಭಿವೃದ್ಧಿಯ ದಿಶೆೆಯಲ್ಲಿ ಅವರಿಂದ ಜನತೆ ಹೆಚ್ಚಿನ ನಿರೀಕ್ಷೆಯಲ್ಲಿದ್ದಾರೆ. ಅಡಿಕೆ ಬೆಳೆಗಾರರು ಆಗಿರುವ ಅವರು ರೈತರ ಸಮಸ್ಯೆಗಳಿಗೆ ಧ್ವನಿಯಾಗುತ್ತಾರೆ ಎಂಬ ನಂಬಿಕೆಯಿದೆ ಎಂದರು.
  ಟಿ.ಎಂ.ಎಸ್ ಉಪಾದ್ಯಕ್ಷ ಎಂ.ಜಿ.ನಾಯ್ಕ ಹಾದ್ರಿಮನೆ ಸ್ವಾಗತಿಸಿದರು. ಉಪ ವ್ಯವಸ್ಥಾಪಕ ಪ್ರಸನಕುಮಾರ ಭಟ್ಟ ಅಭಿನಂದನಾಪತ್ರ ವಾಚಿಸಿದರು. ನಿರ್ದೇಶಕ ಜಿ.ಎಂ.ಭಟ್ಟ ಕಾಜಿನಮನೆ ವಂದಿಸಿದರು.ನಿವೃತ ಮುಖ್ಯ ಶಿಕ್ಷಕ ಜಿ.ಜಿ.ಹೆಗಡೆ ಬಾಳಗೋಡ ಕಾರ್ಯಕ್ರಮ ನಿರ್ವಹಿಸಿದರು.
  ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಪಿ.ಶಾಸ್ತ್ರಿ, ಪ್ರಮುಖರಾದ ಎಸ್.ಕೆ.ಭಾಗವತ್, ಹೆಗ್ಗರಣಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಎಲ್.ಭಟ್ ಉಚಿಜಳ್ಳಿ, ಜಿ.ಕೆ.ಭಟ್ಟ ಕಶಿಗೆ ಮಾತನಾಡಿದರು. ವೇದಿಕೆಯಲ್ಲಿ ಎ.ಪಿ.ಎಂ.ಸಿ ನಿಕಟಪೂರ್ವ ಅಧ್ಯಕ್ಷ ಕೆ.ಕೆ.ನಾಯ್ಕ ಸುಂಕತ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನ್ಮನೆ, ಟಿ.ಎಂ.ಎಸ್ ಪ್ರಧಾನ ವ್ಯವಸ್ಥಾಪಕ ಸತೀಶ ಹೆಗಡೆ ಹೆಗ್ಗಾರಕೈ ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top