ಕಾರವಾರ: ರಾಜ್ಯ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬಂದಿದ್ದ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಅನುಮತಿ ಇಲ್ಲದೆ ಬಸ್ ಬುಕ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ 193 ಮಂದಿ ಬಿಜೆಪಿಯ ಪ್ರಮುಖರು ಹಾಗೂ ಕಾರ್ಯಕರ್ತರ ವಿರುದ್ಧ ಜಿಲ್ಲೆ ವಿವಿಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮೇ.10ರಂದು ನಡೆದ ವಿಧಾನಸಭೆ ಚುನಾವಣೆಗಾಗಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿಲ್ಲೆಯ ಅಂಕೋಲಾದ ಹಟ್ಟಿಕೇರಿಗೆ ಆಗಮಿಸಿದ್ದರು. ಈ ವೇಳೆ ಮೋದಿ ಕಾರ್ಯಕ್ರಮಕ್ಕೆ ಹೋಗಲು ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಿಂದಲ್ಲೂ ಜನರನ್ನ ಕರೆದುಕೊಂಡು ಹೋಗಲು ಬಸ್ ಬುಕ್ ಮಾಡಲಾಗಿತ್ತು.
ಈ ವೇಳೆ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿ ಇದ್ದರೂ ಕೂಡ ಸಂಬಂಧಿಸಿದ ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆಯದೆ, ಬಸ್ ಬುಕ್ ಮಾಡಿ ಕಾರ್ಯಕ್ರಮಕ್ಕೆ ಸಾವಿರಾರು ಜನರನ್ನು ಕರೆದುಕೊಂಡು ಹೋಗಲಾಗಿತ್ತು. ಹೀಗಾಗಿ ಇದೀಗ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಅಡಿಯಲ್ಲಿ 192 ಮಂದಿ ವಿರುದ್ದ ಆಯಾ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು 78 ಮಂದಿ ವಿರುದ್ದ ದಾಖಲಾದರೆ, ಕಾರವಾರ ಕ್ಷೇತ್ರದಿಂದ 12, ಭಟ್ಕಳ 16, ಶಿರಸಿ 46, ಯಲ್ಲಾಪುರ 22, ಹಳಿಯಾಳ ಕ್ಷೇತ್ರದಲ್ಲಿ 18 ಮಂದಿ ವಿರುದ್ದ ಎಫ್ ಐ ಆರ್ ದಾಖಲಾಗಿದೆ. ಚುನಾವಣಾ ಸಮಯದಲ್ಲೆ ಈ ಕುರಿತು ಪ್ರಕರಣ ದಾಖಲಾಗಬೇಕಿತ್ತು ಎನ್ನಲಾಗಿದ್ದು, ಆದರೆ ಚುನಾವಣೆ ನೀತಿಸಂಹಿತೆ ಉಲ್ಲಂಘನೆ ಆಗಿದ್ದರೂ ಪ್ರಕರಣ ದಾಖಲಾಗಿರಲಿಲ್ಲ. ಆದರೆ ಇದೀಗ ಚುನಾವಣಾಧಿಕಾರಿ ಅವರ ನಿರ್ದೇಶನದ ಮೇಲೆ ಪೊಲೀಸ್ ಠಾಣೆಗಳ ಮೇಲೆ ಕೇಸ್ ದಾಖಲಾಗಿದೆ.