ಶಿರಸಿ: ಆಟ ಆಡುವ ವಯಸ್ಸಿನ ಹುಡುಗಿಯೋರ್ವಳು ಒಂದುವರೆ ಗಂಟೆಗಳ ಕಾಲದ ಭರತನಾಟ್ಯ ರಂಗ ಪ್ರವೇಶ ಮಾಡುವ ಮೂಲಕ ಗಮನ ಸೆಳೆದಿದ್ದಾಳೆ.
ಜಿಲ್ಲೆಯ ಪ್ರತಿಭಾವಂತ ಭರತನಾಟ್ಯ ಬಾಲ ಕಲಾವಿದೆ ಕುಮಾರಿ ಶಮಾ ಭಾಗ್ವತ್ ಭಾನುವಾರ ಚಿತ್ರದುರ್ಗದ ತರಾಸು ರಂಗ ಮಂದಿರದಲ್ಲಿ ನಡೆದ ಭರತನಾಟ್ಯ ರಂಗ ಪ್ರದೇಶದಲ್ಲಿ ಪುಷ್ಪಾಂಜಲಿ, ಗಣೇಶ ಸ್ತುತಿ, ಅಲಾರಿಪು, ಜತಿಸ್ವರ, ವರ್ಣ, ಶಿವಸ್ತುತಿ, ಭಜನ್ ತಿಲ್ಲಾನ, ಸೇರಿದಂತೆ ಅನೇಕ ನಾಟ್ಯದಲ್ಲಿ ಗಮನ ಸೆಳೆದಳು.
ನಟುವಾಂಗದಲ್ಲಿ ಶುಭಾ ಧನಂಜಯ ಬೆಂಗಳೂರು ಹಾಗೂ ಮುದ್ರಾ ಧನಾಂಜಯ ಹಾಗೂ ಶ್ವೇತಾ ಮಂಜುನಾಥ, ಹಾಡುಗಾರಿಕೆಯಲ್ಲಿ ರೋಹಿತ್ ಭಟ್ಟ ಬೆಂಗಳೂರು, ಮೃದಂಗದಲ್ಲಿ ನಾಗೇಂದ್ರ ಪ್ರಸಾದ ಬೆಂಗಳೂರು, ವೀಣೆಯಲ್ಲಿ ಗೋಪಾಲ ವೆಂಕಟರಮಣ, ಕೊಳಲಿನಲ್ಲಿ ಶಶಾಂಕ ಜೋಡಿದಾರ ಸಹಕಾರ ನೀಡಿದರು. ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದೆ, ನೃತ್ಯ ಗುರು ಶುಭಾ ಧನಂಜಯ ಗೆಜ್ಜೆ ಪೂಜೆ ನಡೆಸಿ ಕಾಲಿಗೆ ಗೆಜ್ಜೆ ಕಟ್ಟಿದರು. ಇನ್ನೋರ್ವ ಗುರು ಶ್ವೇತಾ ಮಂಜುನಾಥ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಜಾವಾಣಿಯ ದೈನಿಕದ ಕಾರ್ಯ ನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ರಂಗ ಪ್ರವೇಶ ಕಲೆಯ ಬದುಕಿನಲ್ಲಿ ಅತ್ಯಂತ ಮಹತ್ವದ ಘಟ್ಟ. ಗುರು ಶಿಷ್ಯ ಪರಂಪರೆ ಕೇವಲ ಸಂಗೀತ, ನೃತ್ಯದಲ್ಲಿ ಇದೆ. ಅದು ಇಂಜನೀಯರಿಂಗ್, ಮೆಡಿಕಲ್ ಕ್ಷೇತ್ರಕ್ಕೂ ಬೇಕಿದೆ ಎಂದರು.
ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ, ಪ್ರಕೃತಿಯಿಂದ ಸಂಸ್ಕೃತಿ, ಸಂಸ್ಕೃತಿ ಇರದಿದ್ದರೆ ವಿಕೃತಿ ಎಂದರು.
ವಿದ್ಯಾ ಸಂಸ್ಥೆಯ ಬಿ.ವಿಜಯಕುಮಾರ, ರತ್ನಾಕರ ಭಟ್ಟ, ರಾಜು ಭಟ್ಟ ಕಾನಸೂರು ಇತರರು ಇದ್ದರು. ಮಂಜುನಾಥ ಭಾಗವತ ನಿರ್ವಹಿಸಿದರು. ಇದೇ ವೇಳೆ ನೃತ್ಯ ಗುರುಗಳಾದ ಶುಭಾ ಧನಂಜಯ, ಮುದ್ರಾ ಧನಂಜಯ, ಶ್ವೇತಾ ಮಂಜುನಾಥ ಅವರಿಗೆ ಗುರು ವಂದನೆ ಸಲ್ಲಿಸಲಾಯಿತು.
ಲಾಸಿಕಾ ಫೌಂಡೇಶನ್, ನಾಟ್ಯಾಂತರಂಗ ಸಂಸ್ಥೆ ಕಾರ್ಯಕ್ರಮ ಆಯೋಜಿಸಿತ್ತು.