ಗೋಕರ್ಣ: ಶಕ್ತಿ ದೇವತೆ ಎಂದೇ ಖ್ಯಾತಿಯಾಗಿರುವ ಶ್ರೀ ಭದ್ರಕಾಳಿ ದೇವಿಯ ಬಂಡಿಹಬ್ಬವು ಶನಿವಾರ ಸಂಭ್ರಮ-ಸಡಗರದಿಂದ ನಡೆಯಿತು. ಜೂನ್ 1 ರಿಂದ ಆರಂಭಗೊಂಡಿದ್ದ ಬಂಡಿಹಬ್ಬದ ಇತರ ವಿಧಿ-ವಿಧಾನಗಳು ನಡೆದು ಶನಿವಾರ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಶ್ರೀ ಭದ್ರಕಾಳಿ ದೇವಿಯ ಕಳಸವನ್ನು ಹೊತ್ತ ಗುನಗರು ಇಲ್ಲಿಯ ಮುಖ್ಯ ಸಮುದ್ರ ತೀರದವರೆಗೆ ತೆರಳಿ ಮಾಣೇಶ್ವರ ದೇವಸ್ಥಾನಕ್ಕೆ ಬಂದು, ಪೂಜೆಯನ್ನು ಸ್ವೀಕರಿಸಿತು. ಎಲ್ಲ ಸಮಾಜದವರು ಈ ಬಂಡಿಹಬ್ಬದಲ್ಲಿ ತೊಡಗಿಸಿಕೊಂಡಿದ್ದರಿಂದ ಸಾಕಷ್ಟು ಮೆರಗು ನೀಡಿದಂತಾಯಿತು. ದೇವರು ಬರುವ ಸ್ಥಳಗಳಲ್ಲಿ ತಳಿರು-ತೋರಣ ಹಾಗೂ ರಂಗೋಲಿಗಳನ್ನು ಹಾಕಿ ದೇವರಿಗೆ ಪೂಜೆ ಸಲ್ಲಿಸಿದರು.
ದೇವರನ್ನು ಹೊತ್ತ ಗುನಗರು ಸಾಗುತ್ತಿರುವ ಸಂದರ್ಭದಲ್ಲಿ ನೂರಾರು ಜನರು ಅವರೊಟ್ಟಿಗೆ ವಾದ್ಯಗಳೊಂದಿಗೆ ತೆರಳಿದರು. ಹರಕೆ ಫಲ ನೀಡುವವರು ಅದಕ್ಕೆಂದೇ ನಿರ್ಮಾಣಗೊಂಡ ಬಂಡಿಗೆ ತೆಂಗಿನಕಾಯಿ, ಬಾಳೆಕೊನೆ ಸೇರಿದಂತೆ ಇನ್ನಿತರ ಸೇವೆಯನ್ನು ಅರ್ಪಿಸಿದರು. ಭದ್ರಕಾಳಿ ದೇವಿಯ ಬಂಡಿಹಬ್ಬ ಎಂದರೆ ಅದು ಗೋಕರ್ಣ ಬಂಡಿಹಬ್ಬ ಎಂದೇ ಖ್ಯಾತಿಯಾಗಿದೆ. ಗೋಕರ್ಣ ಸೀಮೆಯ ಪ್ರತಿಯೊಬ್ಬರು ಈ ಹಬ್ಬವನ್ನು ಆಚರಿಸುತ್ತಾರೆ.
ಶನಿವಾರ ಶ್ರೀ ಭದ್ರಕಾಳಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮುಂಜಾನೆಯಿಂದಲೇ ಭಕ್ತರು ಇಲ್ಲಿಗೆ ಆಗಮಿಸಿ ಹಣ್ಣು-ಕಾಯಿ ನೀಡಿ ಪೂಜೆ ಸಲ್ಲಿಸಿ ಧನ್ಯತೆ ಮೆರೆದರು. ನಂತರ ಧಾರ್ಮಿಕ ವಿಧಿ-ವಿಧಾನಗಳು ನಡೆದವು. ಇಂದು ಜೂನ್ 11 ರಂದು ಕಿರುಬಂಡಿಹಬ್ಬ ನಡೆಯುವ ಮೂಲಕ ಬಂಡಿಹಬ್ಬ ಸಂಪನ್ನಗೊಳ್ಳಲಿದೆ.