ಭಟ್ಕಳ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ಶನಿವಾರದಂದು ಸಚಿವ ಮಂಕಾಳ ವೈದ್ಯ ಅವರನ್ನ ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ನಡೆಸಲಾದ ಸಭೆಯಲ್ಲಿ ಜಿಲ್ಲೆಯ ಸಾರಿಗೆ ವ್ಯವಸ್ಥೆ ಬಗ್ಗೆ ಸುಧಾರಣೆ ಮತ್ತು ಅಭಿವೃದ್ಧಿಯ ಕುರಿತಾಗಿ ಚರ್ಚೆ ನಡೆಸಿ ಸಚಿವರ ಸೂಚನೆಯನ್ನು ಪಡೆದುಕೊಂಡರು.
ಸಭೆಯಲ್ಲಿ ಕ್ಷೇತ್ರದಲ್ಲಿನ ವಿಶ್ವಪ್ರಸಿದ್ಧ ಮುರ್ಡೇಶ್ವರ ದೇವಾಲಯದವರೆಗೆ ಎಲ್ಲಾ ಬಸ್‌ಗಳು ಸಂಚರಿಸಬೇಕು. ಮುರ್ಡೇಶ್ವರದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ನೀಲನಕ್ಷೆ ಕೂಡಲೇ ಸಿದ್ಧಪಡಿಸಬೇಕೆಂದು ಸಚಿವರು ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ಸಂಚರಿಸುವ ಎಕ್ಸ್ಪ್ರೆಸ್ ಬಸ್‌ಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲು ಸಚಿವ ಮಂಕಾಳ ವೈದ್ಯ ತಿಳಿಸಿದರು.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಶಕ್ತಿ’ ಯೋಜನೆ ಅನುಷ್ಠಾನವಾಗುತ್ತಿದ್ದು, ಎಲ್ಲಿಯೂ ಯಾವುದೇ ರೀತಿ ತೊಂದರೆಯಾಗದಂತೆ ಎಲ್ಲಾ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಯೋಜನೆಯನ್ನು ಅನುಷ್ಠಾನ ಮಾಡಬೇಕೆಂದು ನಿರ್ದೇಶನ ನೀಡಲಾಯಿತು. ಈ ಸಂದರ್ಭದಲ್ಲಿ ಭಟ್ಕಳ ಘಟಕ ವ್ಯವಸ್ಥಾಪಕರು ಇದ್ದರು.