ಶಿರಸಿ: ಬೌದ್ಧಿಕ ಸಂಸ್ಕಾರ ಮನಸ್ಸನ್ನು ಧನಾತ್ಮಕಗೊಳಿಸುತ್ತದೆ ಹಾಗು ಧನಾತ್ಮಕ ಆಲೋಚನೆಗಳು ಮಾನಸಿಕ ಆರೋಗ್ಯದಲ್ಲಿ ಪ್ರಧಾನ ಪಾತ್ರವಹಿಸುತ್ತದೆ ಎಂದು ಪ್ರಾಂಶುಪಾಲರಾದ ಡಾ. ದಾಕ್ಷಾಯಣಿ ಹೆಗಡೆ ನುಡಿದರು.
ಶಿರಸಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮನಃಶಾಸ್ತ್ರ ವಿಭಾಗದಲ್ಲಿ ಆಯೋಜನೆಗೊಂಡ “ಮನೋವಿಜ್ಞಾನದಲ್ಲಿ ವೃತ್ತಿ ಅವಕಾಶಗಳು ಹಾಗು ಧನಾತ್ಮಕ ಮಾನಸಿಕ ಆರೋಗ್ಯ” ಎಂಬ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪಾಲಕರ ಒತ್ತಾಸೆ, ಸಮಾಜದ ನಿರೀಕ್ಷೆಗಳಿಗೆ ಧಕ್ಕೆ ಬಾರದಂತೆ ಸಜ್ಜನರಾಗಿ , ಸಾಧಕರಾಗಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಅನಿತಾ ಭಟ್ ಮನೋವಿಜ್ಞಾನದ ಪದವಿ ಕಲಿಕೆ ನಂತರ ಮುಂದೇನು ಎಂಬ ಕುತೂಹಲ, ಕೌತುಕ ಗೊಂದಲಗಳಿಗೆ ಉತ್ತರವೇ ಈ ಕಾರ್ಯಾಗಾರ ಎಂದರು. ವೃತ್ತಿ ಜೀವನದ ಜಂಜಾಟದಲ್ಲಿ ನಮಗೆ ನಾವು ಸಮಯ ನೀಡಲಾಗದೇ ನಿರ್ಲಕ್ಷ್ಯಕ್ಕೊಳಗಾದ ಮಾನಸಿಕ ಆರೋಗ್ಯದ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಕೂಡ ನಡೆಯಲಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಶಿವಮೊಗ್ಗ ಕಟೀಲ್ ಅಶೋಕ ಪೈ ಮೆಮೋರಿಯಲ್ ಕಾಲೇಜಿನ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಅರ್ಚನಾ ಭಟ್ ಮನೋವಿಜ್ಞಾನದ ಅಧ್ಯಯನದಿಂದ ದೊರೆಯುವ ವಿಭಿನ್ನ ಅವಕಾಶಗಳನ್ನು, ಸಾಧ್ಯತೆಗಳನ್ನು ವಿವರಿಸಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾದ ಶಿವಮೊಗ್ಗ ಕಟೀಲ್ ಅಶೋಕ ಪೈ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ ಧನಾತ್ಮಕ ಮಾನಸಿಕ ಆರೋಗ್ಯದ ಕುರಿತು ಉಪನ್ಯಾಸ ನೀಡಿದರು. ಮನಃಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಶ್ರೀದೇವಿ ಉಪಸ್ಥಿತರಿದ್ದರು. ಮನಃಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ರೀತಾ ವಿ. ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು.
ವಿದ್ಯಾರ್ಥಿನಿ ಅಶ್ವಿನಿ ಮತ್ತು ಸಂಗಡಿಗರ ಹಾಡಿನೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಬಿ.ಏ. ಅಂತಿಮ ವಿದ್ಯಾರ್ಥಿನಿ ಪಲ್ಲವಿ ನಾಯ್ಕ ಸ್ವಾಗತಿಸಿದರು. ವಿದ್ಯಾರ್ಥಿನಿ ಗಾಯತ್ರಿ ಮರಾಠಿ ವಂದನಾರ್ಪಣೆ ಗೈದರು. ಚಂದನಾ ಮಡಿವಾಳ ಕಾರ್ಯಕ್ರಮ ನಿರೂಪಿಸಿದಳು.
ಕಾಲೇಜಿನ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗು ಪ್ರಾಧ್ಯಾಪಕ ವರ್ಗ ಕಾರ್ಯಾಗಾರದಲ್ಲಿ ಭಾಗಿಗಳಾಗಿದ್ದರು.