ಅಂಕೋಲಾ: ಅರಣ್ಯ ಇಲಾಖೆ ಅಂಕೋಲಾ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೋಳೆ ಅವರ ಸಂಯುಕ್ತ ಆಶ್ರಯದಲ್ಲಿ ಬೋಳೆ ಶಾಲೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ನಿಮಿತ್ತ ವೃಕ್ಷಾರೋಪಣ ಕಾರ್ಯಕ್ರಮ ನಡೆಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಪುಷ್ಪಲತಾ ಆರ್.ನಾಯಕ ಗಿಡವನ್ನು ನೆಟ್ಟು ಮಾತನಾಡಿ, ಮನುಷ್ಯನಿಗೂ ಪ್ರಕೃತಿಗೂ ಅವಿನಾಭಾವ ಸಂಬಂಧವಿದೆ. ನಮ್ಮ ಉಸಿರು ಹಸಿರಲ್ಲಿದೆ. ಪ್ರತಿಯೊಬ್ಬರೂ ಮನೆಗೊಂದು ಗಿಡ ನೆಟ್ಟು ಪರಿಸರವನ್ನು ಕಾಪಾಡಬೇಕು ಎಂದರು.
ಅಂಕೋಲಾ ವಲಯ ಅರಣ್ಯಾಧಿಕಾರಿ ಜಿ.ವಿ.ನಾಯಕ ಮಾತನಾಡಿ, ಉಸಿರಾಗಿರುವ ಹಸಿರನ್ನು ಕಾಪಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಸಸ್ಯ ಸಂರಕ್ಷಣೆ ಅರಣ್ಯವನ್ನು ಉಳಿಸಿಕೊಳ್ಳುವ ಪ್ರಯತ್ನ ಪ್ರಾಮಾಣಿಕವಾಗಿ ನಡೆಯಬೇಕು. ಮಕ್ಕಳಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಬೇಕೆಂದರು.
ಪಿಡಿಓ ಗಿರೀಶ ನಾಯಕ ಮಾತನಾಡಿ, ವೃಕ್ಷಗಳು ಭಾರತದ ಸಂಪತ್ತು, ಮರಗಿಡಗಳನ್ನು ಮಕ್ಕಳಂತೆ ಬೆಳೆಸಿ ಪೋಷಿಸಬೇಕೆಂದರು. ಶಾಲಾ ಮುಖ್ಯಾಧ್ಯಾಪಕ ಜಗದೀಶ ಜಿ. ನಾಯಕ ಹೊಸ್ಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತ, ವನಮಹೋತ್ಸವವು ಭಾರತದಲ್ಲಿ ವಾರ್ಷಿಕವಾಗಿ ಗಿಡ ನೆಡುವ ಹಬ್ಬವಾಗಿದೆ. ನಮ್ಮ ಮುಂಬರುವ ಪೀಳಿಗೆ ಸುಂದರವಾದ ಜೀವನವನ್ನು ಹೊಂದಲು ಆರೋಗ್ಯಕರ ಮತ್ತು ಸಂತೋಷದ ವಾತಾವರಣ ನೀಡಲು ನಮ್ಮ ಸುತ್ತಲಿನ ಹಸಿರನ್ನು ಪ್ರೀತಿಸಿ, ನಮ್ಮ ಪರಿಸರವನ್ನು ಉಳಿಸಬೇಕೆಂದರು.
ಡಿವೈಆರ್‌ಎಫ್‌ಓ ಪ್ರಮೋದ ಪಟಗಾರ, ಬೀಟ್ ಫಾರೆಸ್ಟರ್ ಲಿಂಗಣ್ಣ, ಗ್ರಾಮ ಪಂಚಾಯಿತಿ ಸದಸ್ಯೆ ಕುಸುಮಾ ಆಗೇರ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಶ್ವೇತಾ ಪ್ರಶಾಂತ ಆಗೇರ, ಸಾವಿತ್ರಿ ಮಂಜುನಾಥ ಆಗೇರ, ಅರಣ್ಯ ಸಿಬ್ಬಂದಿಗಳಾದ ಮಹೇಶ ಗಾಂವಕರ, ಚೇತನ ಮುಕುಂದ ನಾಯ್ಕ, ಸುಧಾಕರ ಪೊಕ್ಕ ಗಾಂವಕರ, ಶಾಲಾ ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಸವಿತಾ ಆನಂದು ನಾಯ್ಕ ನಿರ್ವಹಿಸಿ, ವಂದಿಸಿದರು.