ಕಾರವಾರ: ತಾಲೂಕಿನ ನಗೆ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಹಾಗೂ ಪರಿಸರ ಜಾಗೃತಿ ಅಭಿಯಾನವನ್ನು ವಿನೂತನವಾಗಿ ಆಚರಿಸಲಾಯಿತು.
ಶಾಲೆಯ ಹೂ ತೋಟದಲ್ಲಿ ಮಕ್ಕಳು ವಿವಿಧ ಸಸಿಗಳನ್ನು ನೆಡುವುದರ ಮೂಲಕ ಪರಿಸರ ಜಾಗೃತಿಯ ಬಗ್ಗೆ ಅರಿವನ್ನು ಮೂಡಿಸಲಾಯಿತು. ಹಾಗೆಯೇ ಶಾಲಾ ಆವರಣದಲ್ಲಿ ಬೆಳೆದ ಹಲಸಿನ ಮರದ ಹಣ್ಣುಗಳನ್ನು ಕೊಯ್ದು ಸಮೀಪದ ಸರಕಾರಿ ಶಾಲಾ ಮಕ್ಕಳಿಗೆ ವಿತರಿಸುವ ಕಾರ್ಯಕ್ರಮ ಮಾಡಲಾಯಿತು. ಹಿ.ಪ್ರಾ. ಶಾಲೆ ಬೇಳೂರು, ಹಿ.ಪ್ರಾ. ಶಾಲೆ ದೇವಳಮಕ್ಕಿ, ಹಿ.ಪ್ರಾ. ಶಾಲೆ ಬರ್ಗಲ್, ಹಿ.ಪ್ರಾ. ಶಾಲೆ ಖಾರ್ಗಾ ಮಕ್ಕಳಿಗೆ ಹಣ್ಣುಗಳನ್ನು ಸೇವಿಸಲು ನೀಡಲಾಯಿತು.
ಹಾಗೆಯೇ ತೆಂಗಿನ ಮರದಲ್ಲಿ ಬೆಳೆದ ತೆಂಗಿನ ಕೊಯ್ಲನ್ನು ಕಟಾವು ಮಾಡಿ ತೆಂಗಿನ ಕಾಯಿಗಳನ್ನು ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಕೆಗೆ ಬಳಸಲು ಇಡಲಾಯಿತು. ಶಾಲಾ ಮುಖ್ಯಾಧ್ಯಾಪಕ ಅಖ್ತರ್ ಸೈಯದ್ ಅವರು ಸರ್ವರನ್ನು ಸ್ವಾಗತಿಸಿ ಪರಿಸರ ಹಾಗೂ ಗಿಡಮರಗಳ ಅನ್ಯೋನ್ಯತೆಯ ಬಗ್ಗೆ ಮತ್ತು ಪ್ರಯೋಜನಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು.
ಶಾಲಾ ಸಹಶಿಕ್ಷಕಿ ರೂಪಾ ಉಮೇಶ ನಾಯ್ಕ ಇವರು ಕಾರ್ಯಕ್ರಮ ನಿರ್ವಹಣೆ ಮಾಡಿ ಶಾಲೆಯಲ್ಲಿರುವ ಇಕೋ ಕ್ಲಬ್‌ನಲ್ಲಿ ಬೆಳೆಸಿದ ಗಿಡಗಳ ಬಗ್ಗೆ ಪರಿಚಯ ಮಾಡಿಕೊಟ್ಟರು. ಎಸ್‌ಡಿಎಂಸಿ ಪಾಲಕ ಪ್ರತಿನಿಧಿಗಳಾದ ಗಣಪತಿ ಗುರ್ಖ್ಯಾ ಗೌಡ ಇವರು ಶಾಲಾ ಆವರಣದಲ್ಲಿ ಬೆಳೆದ ಹಲಸಿನ ಹಣ್ಣುಗಳನ್ನು ಹಾಗೂ ತೆಂಗಿನ ಕಾಯಿಗಳನ್ನು ತೆಗೆದುಕೊಟ್ಟರು. ಶಾಲಾ ಮಕ್ಕಳು ಹಾಗೂ ಅಡುಗೆ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.