ಶಿರಸಿ: ಎಂಟನೆ ತರಗತಿ ಓದುತ್ತಿರುವ ಜಿಲ್ಲೆಯ ಬಾಲೆಯೊಬ್ಬಳು ದೂರದ ಚಿತ್ರದುರ್ಗದಲ್ಲಿ ರಂಗಪ್ರವೇಶಕ್ಕೆ ಅಣಿಯಾಗುತ್ತಿದ್ದಾಳೆ. ಲಾಸಿಕಾ ಫೌಂಡೇಶನ್ ಹಾಗೂ ನಾಟ್ಯಂತರಂಗ ಬೆಂಗಳೂರು ಜಂಟಿಯಾಗಿ ಹಮ್ಮಿಕೊಂಡ ಭರತನಾಟ್ಯ ರಂಗ ಪ್ರವೇಶ ಚಿತ್ರದುರ್ಗದ ತರಾಸು ರಂಗ ಮಂದಿರದಲ್ಲಿ ಜೂನ್ 11 ರ ಸಂಜೆ 4.30ರಿಂದ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಶುಭಾ ಧನಂಜಯರ ಶಿಷ್ಯೆ, ಭರತನಾಟ್ಯ ಕಲಾವಿದೆ ಶ್ವೇತಾ ಭಟ್ಟ ಕಾನಸೂರು ಹಾಗೂ ಯಲ್ಲಾಪುರದ ಮಂಜುನಾಥ ಭಾಗ್ವತ್ ಪುತ್ರಿ ಶಮಾ ಅಲ್ಲಿನ ವಿದ್ಯಾ ವಿಕಾಸ ಶಾಲೆಯಲ್ಲಿ ಓದುತ್ತಿದ್ದಾಳೆ. ಈಗಾಗಲೇ ನಾಡಿನ ಹಲವಡೆ ರಂಗ ಪ್ರದರ್ಶನ ಕೂಡ ನೀಡಿರುವ ಶಮಾ ಎಂಬ ಬಾಲ ಪ್ರತಿಭೆಗೆ ಈಗಾಗಾಲೇ ಹೂಮಣಿ, ಚಿನ್ಮೂಲಾದ್ರಿ ಪ್ರಶಸ್ತಿ, ಮಕ್ಕಳ ರಾಜ್ಯೋತ್ಸವ, ಹವ್ಯಕ ಪಲ್ಲವ, ಲುಕ್ಕಿಂಗ್ ಬ್ಯೂಟಿಫುಲ್ ಸೇರಿದಂತೆ ಅನೇಕ ಪ್ರಶಸ್ತಿ ಬಂದಿವೆ.ಅಂದಿನ ರಂಗ ಪ್ರವೇಶದಲ್ಲಿ ಹಿರಿಯ ಗಾಯಕರ, ಕಲಾವಿದರ ಸಾಥಿಯಲ್ಲಿ ಶಮಾ ವಿವಿಧ ನೃತ್ಯಬಂಧ ಪ್ರಸ್ತುತಗೊಳಿಸಲಿದ್ದಾಳೆ.
ಅಂದಿನ ಸಭಾ ಸಂಭ್ರಮ ಹಾಗೂ ಗುರು ವಂದನೆ ಕಾರ್ಯಕ್ರಮದಲ್ಲಿ ಪ್ರಜಾವಾಣಿ ದೈನಿಕದ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ ಚೆಲುವಾದಿ, ಸೆಲ್ಕೋ ಸಿಇಓ ಮೋಹನ ಭಾಸ್ಕರ ಹೆಗಡೆ, ವಿದ್ಯಾ ವಿಕಾಸದ ಕಾರ್ಯದರ್ಶಿ ಬಿ.ವಿಜಯಕುಮಾರ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆ ಅಧ್ಯಕ್ಷ ರತ್ನಾಕರ ಭಟ್ಟ ಹಾಗೂ ಕಾರ್ಯದರ್ಶಿ ಮಂಜುನಾಥ ಭಾಗ್ವತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.