ಕಾರವಾರ: ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್ ಮತ್ತು ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯನ್ನು ಮುಂದುವರಿಸಲು ರಾಜ್ಯ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಅನುಮತಿ ನೀಡಿದೆ. ಈಗಾಗಲೇ ಸುಮಾರು 75 ಸಾವಿರಕ್ಕಿಂತ ಹೆಚ್ಚು ಶಿಕ್ಷಕರಿಂದ ವರ್ಗಾವಣೆಗಾಗಿ ಅರ್ಜಿ ಬಂದಿದ್ದು, ಸುಮಾರು 30 ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ವರ್ಗಾವಣೆಯ ಲಾಭ ಸಿಗಲಿದೆ ಎಂದು ಸರಕಾರ ತಿಳಿಸಿದೆ.
ಜನವರಿಯಲ್ಲಿ ವರ್ಗಾವಣೆ ಮತ್ತು ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಗೊಂಡಿತ್ತು.ಆ ಬಳಿಕ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಳಿಸಲಾಗಿತ್ತು. ಎಪ್ರಿಲ್‌ನಲ್ಲಿ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸುವ ಚಿಂತನೆ ನಡೆದಿದ್ದರೂ ಚುನಾವಣ ನೀತಿ ಸಂಹಿತೆ ಕಾರಣದಿಂದ ಚುನಾವಣಾ ಆಯೋಗ ಅವಕಾಶ ನೀಡಿರಲಿಲ್ಲ. ಈಗ ಹೊಸ ಸರಕಾರ ವರ್ಗಾವಣೆಗೆ ಅವಕಾಶ ಕಲ್ಪಿಸಿದೆ.
ಸರಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು, ಪ್ರಾಥಮಿಕ ಶಾಲಾ ಶಿಕ್ಷಕರು, ತತ್ಸ ಮಾನ ವೃಂದದ ಶಿಕ್ಷಕರು, ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು, ತತ್ಸಮಾನ ವೃಂದದ ಹೆಚ್ಚುವರಿ ಮತ್ತು ಸಾಮಾನ್ಯ ವರ್ಗಾವಣೆಯ ಗಣಕೀಕೃತ ಕೌನ್ಸೆಲಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ.