ಕಾರವಾರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಸಾಕಷ್ಟು ರಾಜಕೀಯ ಬೆಳವಣಿಗೆಗಳಾಗುತ್ತಿದೆ. ಇತ್ತ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತ ಎನ್ನಲಾಗಿದ್ದು ಜಿಲ್ಲೆಯ ಕಾಂಗ್ರೆಸ್ ಧುರೀಣ ಆರ್ ವಿ ದೇಶಪಾಂಡೆ ಸಹ ಇದಕ್ಕೆ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಪಕ್ಷೇತರವಾಗಿ ಅಥವಾ ಜೆಡಿಎಸ್ ನಿಂದ ಸ್ಪರ್ಧಿಸಲು ಆನಂದ್ ಅಸ್ನೋಟಿಕರ್ ಸಜ್ಜಾಗಿದ್ದರು. ಆದರೆ ಒಂದೊಮ್ಮೆ ಸೋಲನ್ನ ಕಂಡರೇ ತನ್ನ ಬೆಂಬಲಿಗರು ಅತಂತ್ರರಾಗುತ್ತಾರೆ ಎಂದು ಚುನಾವಣೆಗೆ ಸ್ಪರ್ಧಿಸದೇ ಸುಮ್ಮನಾಗಿದ್ದರು. ಅಲ್ಲದೇ ತನ್ನ ರಾಜಕೀಯ ಗುರುವಿನಂತಿದ್ದ ಸಚಿವ ಮಧು ಬಂಗಾರಪ್ಪನವರ ಸೂಚನೆ ಮೇರೆಗೆ ಆನಂದ್ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿದಿದ್ದರು.
ಕಾರವಾರದಲ್ಲಿ ಶಾಸಕ ಸತೀಶ್ ಸೈಲ್ ಪರ ಆನಂದ್ ವಿವಿಧೆಡೆ ಪ್ರಚಾರ ನಡೆಸಿದ್ದು ಸೈಲ್ ಗೆಲುವಿಗೆ ಇದು ಪ್ರಮುಖ ಕಾರಣವಾಗಿತ್ತು. ಅಲ್ಲದೇ ಜೋಯಿಡಾ ತಾಲೂಕಿನಲ್ಲೂ ಆನಂದ್ ದೇಶಪಾಂಡೆ ಪರ ಪ್ರಚಾರ ನಡೆಸಿದ್ದು ಆನಂದ್ ಪ್ರಚಾರ ನಡೆಸಿದ ಸ್ಥಳದಲ್ಲಿ ದೇಶಪಾಂಡೆಗೆ ಲೀಡ್ ಸಿಕ್ಕಿದ್ದು ದೇಶಪಾಂಡೆ ಗೆಲುವಿಗೆ ಇದು ಸಹ ಕಾರಣವಾಗಿತ್ತು. ಚುನಾವಣೆ ನಂತರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದ್ದ ಆನಂದ್ ಈ ಬಾರಿ ಬಿಜೆಪಿ ಅಥವಾ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದರು. ಆದರೆ ಸದ್ಯ ಬಿಜೆಪಿಗೆ ಆನಂದ್ ಅಸ್ನೋಟಿಕರ್ ಸೇರ್ಪಡೆ ಕಷ್ಟಸಾಧ್ಯ ಎನ್ನಲಾಗಿದೆ. ಒಂದೊಮ್ಮೆ ಸೇರಿಸಿಕೊಂಡರು ಲೋಕಸಭಾ ಚುನಾವಣೆಯಲ್ಲಿ ಟಿಕೇಟ್ ಕೊಡುವುದು ಗ್ಯಾರಂಟಿ ಇಲ್ಲ ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ಕಾಂಗ್ರೆಸ್ ನತ್ತ ಆನಂದ್ ಒಲವು ತೋರಿದ್ದು ಪಕ್ಷ ಸೇರ್ಪಡೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಜೊತೆ ಆನಂದ್ ಒಂದು ಸುತ್ತು ಮಾತುಕತೆ ನಡೆಸಿದ್ದು ಮಧು ಬಂಗಾರಪ್ಪನವರ ನೇತೃತ್ವದಲ್ಲಿಯೇ ಕಾಂಗ್ರೆಸ್ ಸೇರಲು ಆನಂದ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇನ್ನು ಒಂದೆರಡು ತಿಂಗಳಿನಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಕಾಂಗ್ರೆಸ್ ಸೇರುವ ಚಿಂತನೆಗೆ ಆನಂದ್ ಮುಂದಾಗಿದ್ದು ಪಕ್ಷದ ನಾಯಕರು ಈ ಬಾರಿ ಆನಂದ್ ಗೆ ಲೋಕಸಭಾ ಚುನಾವಣೆಯಲ್ಲಿ ಟಿಕೇಟ್ ಕೊಡುತ್ತಾರೋ ಇಲ್ಲವೋ ಕಾದು ಬೇಕಾಗಿದೆ.
ದೇಶಪಾಂಡೆ ಜೊತೆ ಸಖ್ಯ
ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕಾಂಗ್ರೆಸ್ ಸೇರ್ಪಡೆಗೆ ಹಿರಿಯ ಶಾಸಕ ಆರ್ ವಿ ದೇಶಪಾಂಡೆ ಸಹ ಗ್ರೀನ್ ಸಿಗ್ನಲ್ ಕೊಡಲು ಮುಂದಾಗಿದ್ದಾರೆ ಎನ್ನಲಾಗಿದೆ. 2013ರ ವಿಧಾನಸಭಾ ಚುನಾವಣೆಯಲ್ಲಿಯೇ ಆನಂದ್ ಕಾಂಗ್ರೆಸ್ ಸೇರಲು ಮುಂದಾಗಿದ್ದರು. ಆದರೆ ದೇಶಪಾಂಡೆ ವಿರೋಧದಿಂದ ಇದು ಸಾಧ್ಯವಾಗಿರಲಿಲ್ಲ.
ಸದ್ಯ ದೇಶಪಾಂಡೆ ಸಹ ಆನಂದ್ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದ್ದು ಆನಂದ್ ಸೇರ್ಪಡೆಗೆ ಯಾವುದೇ ಅಡ್ಡಿ ಬರುವುದಿಲ್ಲ ಎನ್ನಲಾಗಿದೆ. ಅಲ್ಲದೇ ಶಾಸಕ ಸತೀಶ್ ಸೈಲ್ ಸಹ ಇದಕ್ಕೆ ಬೆಂಬಲ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.