ಹೊನ್ನಾವರ: ಕಾಸರಕೋಡ ಟೊಂಕಾ ಅಳವೆ ದಂಡೆಯ ಬಳಿ ಸಮುದ್ರದ ಅಲೆಗೆ ಸಿಲುಕಿ ಬೇಲೇಕೆರಿಯ ಬೋಟಿಗೆ ಹಾನಿಯಾದ ವರದಿಯಾಗಿದೆ.
ತಾಲೂಕಿನ ಕಾಸರಕೋಡ ಸಮೀಪದ ಅಳವೆ ದಂಡೆಯಲ್ಲಿ ಬೋಟು ಸಾಗಿಸುವಾಗ ಸಮುದ್ರದ ಅಲೆಗೆ ಸಿಲುಕಿ ಹಾನಿಯಾಗಿದೆ. ಕಾರವಾರದಿಂದ ತಿಂಗಳ ಹಿಂದೆ ಟೊಂಕಾಗೆ ರಿಪೇರಿಗೆ ಆಗಮಿಸಿದ ಬೋಟು ಮಂಗಳವಾರ ವಾಪಸ್ಸು ತೆರಳುವಾಗ ಟೊಂಕಾದ ಸಮೀಪ ಸಮುದ್ರದ ಅಲೆಗೆ ಬೋಟು ಸಿಲುಕಿ ಹಾನಿಯಾಗಿದೆ. ಕಾರವಾರ ಬೇಲೇಕೆರಿಯ ಕೃಷ್ಣ ಮಾಲಿಕತ್ವದ ತಿರಂಗಾ ಬೋಟು ಹಾನಿಯಾಗಿದ್ದು, 20 ಲಕ್ಷದಷ್ಟು ಹಾನಿಯಾಗಿರಬಹುದೆಂದು ಅಂದಾಜಿಸಲಾಗಿದೆ.
ಕಳೆದ ಹಲವು ದಶಕಗಳಿಂದ ಅಳವೆಯಲ್ಲಿ ಹೂಳೆತ್ತುವಂತೆ ಮೀನುಗಾರರು ಆಗ್ರಹಿಸುತ್ತಿದ್ದರು. ಇತ್ತೀಚಿನ ವರ್ಷದಲ್ಲಿ ಪದೇ ಪದೇ ಮೀನುಗಾರಿಕೆ ತೆರಳಿ ವಾಪಾಸ್ಸಾಗುವ ವೇಳೆ ಬೋಟು ಮುಳುಗಿ ಹಾನಿಯಾಗುತ್ತಿದೆ. ರಾಜ್ಯದ ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ವೈದ್ಯ ಇದೇ ಕ್ಷೇತ್ರದವರಾಗಿದ್ದು, ಈ ಬಾರಿಯಾದರೂ ಮೀನುಗಾರರ ಈ ಬೇಡಿಕೆ ಈಡೇರುವ ಮೂಲಕ ದಶಕಗಳ ಸಮಸ್ಯೆಗೆ ಮುಕ್ತಿ ಸಿಗಬೇಕಿದೆ.