ಶಿರಸಿ: ತಾಲೂಕಿನ ಹೆಗಡೆಕಟ್ಟಾ ಪಂಚಲಿಂಗ ಪಕ್ಕದ ಮುಂಡಗೆಮನೆಯಲ್ಲಿ ಕಳೆದ ರಾತ್ರಿ ಆಕಸ್ಮಿಕವಾಗಿ ಬಿದ್ದ ಬೆಂಕಿಗೆ ಎಕರೆಗೂ ಅಧಿಕ ವಿಸ್ತೀರ್ಣದ ಅಡಿಕೆ ತೋಟ ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಡೆದಿದೆ.
ಇಲ್ಲಿನ ನಾಲ್ವರು ರೈತರಿಗೆ ಸಂಬಂಧಿಸಿದ ಅಡಿಕೆ ತೋಟ ಬೆಂಕಿಗೆ ಆಹುತಿಯಾಗಿದ್ದು, ಮುಂದೇನು ಎಂಬ ಚಿಂತೆ ಕಾಡಿದೆ. ಶಿರಸಿ ತಾಲೂಕಿನಲ್ಲೇ ಕಳೆದ ಒಂದು ತಿಂಗಳುಗಳ ಈಚೆಗೆ ಕಲಕೈ, ಅಮಚಿಮನೆ ತೋಟಗಳು ಸುಟ್ಟ ವರದಿಯ ಬೆನ್ನಲ್ಲೇ ಮುಂಡಿಗೆಮನೆ ತೋಟದ ಸರಕ್ಕೆ ಬೆಂಕಿ ಬಿದ್ದಿದೆ. ತಡ ರಾತ್ರಿ 2 ಗಂಟೆ ಸುಮಾರಿಗೆ ಬೆಂಕಿ ತಗುಲಿದ್ದು, ಇದು ಹೇಗಾಗಿದೆ ಎಂಬುದೇ ತಿಳಿಯದಾಗಿದೆ ಎನ್ನಲಾಗಿದೆ. ಮುಂಡಗೆಮನೆಯಿಂದ ಕಾಣದಷ್ಟು ದೂರದಲ್ಲಿ ಬೆಂಕಿ ಬಿದ್ದಿದ್ದು ಪಕ್ಕದ ಹಳ್ಳಿಯವರೊಬ್ಬರಿಗೆ ಬೆಂಕಿ ಬೆಳಕು ಕಂಡು ಇಲ್ಲಿಗೆ ಬಂದು ಮಾಹಿತಿ ತಿಳಿಸಿದ ಬಳಿಕ ಬೆಂಕಿ ನಂದಿಸಲು ಓಡಿದ್ದಾರೆ.
ಮುಂಡಗೆಮನೆ ತೋಟ ಬಹು ಬೆಳೆಯ ಸಮೃದ್ಧ ತೋಟವಾಗಿದ್ದು ಈಗ ಬಾಳೆ, ಏಲಕ್ಕಿ, ಕಾಳು ಮೆಣಸು, ಅಡಿಕೆ ಸೇರಿದಂತೆ ಬಹು ಬೆಳೆಗೂ ಹಾನಿಯಾಗಿದೆ. ಬೇಸಗೆಯ ಕಾಲದಲ್ಲಿ ಭೂಮಿ ಕಾಯಬಾರದು, ಮಳೆಗಾಲದಲ್ಲಿ ಮೇಲ್ಮಣ್ಣು ತೊಯ್ಯಬಾರದು ಎಂದು ಹಾಕಲಾದ ದಪ್ಪನೆಯ ಕರಡ, ದರಕುಗಳಿಗೆ ಅಗ್ನಿ ತಗುಲಿ ಸಂಪೂರ್ಣ ಸುಟ್ಟು ಹೋಗಿದೆ. ಗೋಪಾಲಕೃಷ್ಣ ಹೆಗಡೆ ಸಹೋದರರಿಗೆ ಸಂಬಂಧಿಸಿದ ಸುಮಾರು ಎಂಟು ಬಣ್ಣದ ಸುಮಾರು ಅರ್ಧ ಎಕರೆಗೂ ಅಧಿಕ ತೋಟ, ಮಧುಕೇಶ್ವರ ಹೆಗಡೆ ಅವರಿಗೆ ಸಂಬಂಧಿಸಿದ 15 ಗುಂಟೆ ತೋಟ, ಈಶ್ವರ ಹೆಗಡೆ ಕೊರಟಿಬೈಲಿನ ಹಾಗೂ ತಿಮ್ಮಾಣಿ ದೀಕ್ಷಿತರಿಗೆ ಸಂಬಂಧಿಸಿದ ಎಂಟತ್ತು ಗುಂಟೆ ತೋಟ ಹಾನಿಯಾಗಿದೆ. ರಾತ್ರಿ ಸುದ್ದಿ ತಿಳಿದ ಗ್ರಾಮಸ್ಥರು ಆಗಮಿಸಿ ಬೆಂಕಿ ಆರಿಸಲು ಬೆಳಗಿನ ತನಕ ಶ್ರಮಿಸಿದರು.
ಒಂದು ಅಡಿಕೆ ತೋಟಕೆ ಹಾನಿ ಎಂದರೆ ಈ ವರ್ಷದ ಬೆಳೆ ಜೊತೆ ಆರೆಂಟು ವರ್ಷದ ಬೆಳೆ ಕೂಡ ಸಿಗಂದತೆ ಆಗಲಿದೆ. ಬೆಳೆಯ ಮರು ನಾಟಿ ಕೂಡ ವೆಚ್ಚದಾಯಕ ಆಗಲಿದೆ.