ಹೊನ್ನಾವರ: ಭಟ್ಕಳ ವಿಧಾನಸಭಾ ಕ್ಷೇತ್ರದಿಂದ ಎರಡನೇ ಬಾರಿ ಆಯ್ಕೆಯಾಗಿರುವ ಶಾಸಕ ಮಂಕಾಳ ವೈದ್ಯರಿಗೆ ಬಂದರು ಮತ್ತು ಮೀನುಗಾರಿಕೆ ಸಚಿವರನ್ನಾಗಿಸಿ, ಈ ಬಾರಿಯ ರಾಜ್ಯದ ಮಂತ್ರಿಮಂಡಲದಲ್ಲಿ ಜಿಲ್ಲೆಗೆ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮೀನುಗಾರ ಮುಖಂಡರು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಿಂದ ಮೀನುಗಾರ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಈವರೆಗೆ ಪ್ರಾತಿನಿಧ್ಯ ಲಭ್ಯವಾಗದೇ ಇರುವ ಹಿನ್ನೆಲೆಯಲ್ಲಿ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಾಸಕ ಮಂಕಾಳ ವೈದ್ಯರಿಗೆ ಈ ಬಾರಿಯ ಸಚಿವ ಸಂಪುಟದಲ್ಲಿ ಬಂದರು ಮತ್ತು ಮೀನುಗಾರಿಕಾ ಖಾತೆ ಸಚಿವ ಸ್ಥಾನ ನೀಡುವಲ್ಲಿ ಪರಿಗಣಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ರಾಜ್ಯದ ಕರಾವಳಿಯ ತೀರಗಳಲ್ಲಿ ಮೀನುಗಾರರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈವರೆಗೆ ಮೀನುಗಾರರಲ್ಲದವರು ಹೆಚ್ಚು ಅವಧಿಗೆ ಮೀನುಗಾರಿಕೆ ಸಚಿವರಾಗಿದ್ದರಿಂದ ಮೀನುಗಾರಿಕೆ ಕ್ಷೇತ್ರದಲ್ಲಿನ ಹಲವು ಸಮಸ್ಯೆಗಳು ಬಗೆಹರಿಯದೇ ಹಾಗೆಯೇ ಉಳಿದಿದೆ.ಹೊನ್ನಾವರ ಮೀನುಗಾರಿಕೆ ಬಂದರಿನಲ್ಲಿ ಹೇರಳಪ್ರಮಾಣದ ಹೂಳು ತುಂಬಿಕೊಂಡಿದ್ದು ಬೋಟುಗಳ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗಿದೆ .ಕರಾವಳಿ ತೀರಗಳ ನಿರ್ವಹಣೆಯ ವಿಚಾರದಲ್ಲಿ ಈ ವರೆಗಿನ ಹಲವು ತಪ್ಪು ನೀತಿಗಳಿಂದ ಕರಾವಳಿ ಮೀನುಗಾರಿಕಾ ವಲಯವು ಇಂದು ಅಪಾಯದಲ್ಲಿದೆ. ಮೀನುಗಾರರ ಬದುಕು ಇಂದು ಸಂಕಷ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ಮೀನುಗಾರ ಜನಾಂಗದ ಮಂಕಾಳ ವೈದ್ಯ ಸೇರಿದಂತೆ ಈ ಜಿಲ್ಲೆಗೆ ಇಬ್ಬರು ಸಚಿವರಾದರೆ ಮೀನುಗಾರಿಕೆ ಸಹಿತ ಜಿಲ್ಲೆಯ ವಿವಿಧ ಸಮಸ್ಯೆಗಳನ್ನು ಬಗೆಹರಿಸಿ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಾಗಬಹುದು ಎನ್ನುವ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ಅಜೀತ ತಾಂಡೇಲ್ ಕರ್ಕಿ, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಭಾಷಾ ಪಟೇಲ್, ಕರಾವಳಿ ಮೀನುಗಾರರ ಕಾರ್ಮಿಕರ ಸಂಘದ ಅಧ್ಯಕ್ಷ ರಾಜೇಶ್ ಜಿ.ತಾಂಡೇಲ, ಮೀನುಗಾರರ ಪ್ರಮುಖ ಗಣಪತಿ ತಾಂಡೇಲ ಕಾಸರಕೋಡ ಇದ್ದರು.